ಬೆಂಗಳೂರು: “ಏತ ನೀರಾವರಿ ಯೋಜನೆಗಳ ಮುಖ್ಯಸ್ಥಾವರಗಳ ನಿರ್ವಹಣೆಗಾಗಿ ಇಂಧನ ಇಲಾಖೆಯಿಂದ 3 ಮಂದಿ ವಿದ್ಯುತ್ ಎಂಜಿನಿಯರ್ಗಳನ್ನು ಎರವಲು ಸೇವೆ ಮೇಲೆ ಪಡೆಯಲಾಗಿದೆ. ಮಿಕ್ಕಂತೆ ಅಗತ್ಯಕ್ಕೆ ಅನುಗುಣವಾಗಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಇಲಾಖೆಯಿಂದಲೇ ಎಲೆಕ್ಟ್ರಿಕಲ್ ಎಂಜಿನಿಯರ್ಗಳನ್ನು ನೇಮಕಾತಿ ಮಾಡಿಕೊಳ್ಳಲು ನಿಯಮ ತರಲಾಗುವುದು” ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಏತ ನೀರಾವರಿ ಯೋಜನೆಯಲ್ಲಿ ಅಳವಡಿಸಿರುವ ಬೃಹತ್ ಪಂಪ್ಗಳ ನಿರ್ವಹಣೆಗೆ ಎಲೆಕ್ಟ್ರಿಕಲ್ ಎಂಜಿನಿಯರ್ಗಳ ಲಭ್ಯತೆ ಬಗ್ಗೆ ಜೆಡಿಎಸ್ ಶಾಸಕ ಎ.ಮಂಜು ಅವರು ಗಮನ ಸೆಳೆದರು. ಆಗ “ಹಿಡಕಲ್ ಜಲಾಶಯದ ಜಿಎಲ್ಬಿಸಿ ಕಾಲುವೆಯಿಂದ ತಾಲೂಕುವಾರು ನೀರಿನ ಹಂಚಿಕೆಯಾಗಿಲ್ಲ” ಎಂದು ಮಹೇಂದ್ರ ಕಲ್ಲಪ್ಪ ತಮ್ಮಣ್ಣ ಅವರು ಪ್ರಸ್ತಾಪಿಸಿದರು. ಆಗ “ನೀರು ಹಂಚಿಕೆ ತಾರತಮ್ಯ ಉಂಟಾಗಿದ್ದರೆ ಸಮಸ್ಯೆ ಬಗೆಹರಿಸಲಾಗುವುದು. ಜುಲೈ 25 ರಂದು ಅಧಿಕಾರಿಗಳ ಸಭೆಯಲ್ಲಿ ಇದರ ಬಗ್ಗೆ ಗಮನ ಹರಿಸಲಾಗುವುದು. ಇದಕ್ಕಾಗಿ ವಿಶೇಷ ಸಭೆ ಕರೆದು ನಿಮ್ಮ ಅಹವಾಲು ಆಲಿಸಲಾಗುವುದು” ಎಂದು ಡಿಕೆಶಿ ತಿಳಿಸಿದರು.