ಬೆಂಗಳೂರು: ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಬೆನ್ನಲೇ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗುತ್ತಿದೆ. ರಾಜ್ಯಪಾಲರ ನಿರ್ಧಾರ ಖಂಡಿಸಿ ಕಾಂಗ್ರೆಸ್ ಸೇರಿ ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬುಲೆಟ್ ಪ್ರೂಫ್ ಕಾರು ಬಳಸಲು ಮುಂದಾಗಿದ್ದಾರೆ. ಅಲ್ಲದೆ, ಝೆಡ್ ಶ್ರೇಣಿಯ ಭದ್ರತೆಯನ್ನ ಪೊಲೀಸರು ಒದಗಿಸಿದ್ದಾರೆ.
ಪ್ರಾಸಿಕ್ಯೂಷನ್ ಅನುಮತಿ ವಿರೋಧಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಯುತ್ತಿವೆ. ಮುಂಜಾಗ್ರತ ಕ್ರಮವಾಗಿ ನಗರ ಪೊಲೀಸರು ಬುಲೆಟ್ ಪ್ರೂಫ್ ಕಾರು ಬಳಕೆ ಹಾಗೂ ಝೆಡ್ ಶ್ರೇಣಿಯ ಭದ್ರತೆಯನ್ನ ಒದಗಿಸಲಾಗಿದೆ. ಆಗಸ್ಟ್ 29ರ ವರೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗದಂತೆ ಕೇಂದ್ರ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ ಎಂದು ರಾಜಭವನದ ಮೂಲಗಳು ತಿಳಿಸಿವೆ.
ಎಚ್ಚರಿಕೆ ನಡೆ ಅನುಸರಿಸಿರುವ ರಾಜ್ಯಪಾಲರು ಇಂದು ಮೈಸೂರು ಬ್ಯಾಂಕ್ ವೃತ್ತದ ಬಳಿಯಿರುವ ನೃಪತುಂಗ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಆಗಸ್ಟ್ 29ರವರೆಗೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ರಾಜ್ಯಪಾಲರು ಬಹುತೇಕ ಗೈರಾಗುವ ಸಾಧ್ಯತೆಯಿದೆ. ಪ್ರಾಸಿಕ್ಯೂಷನ್ ಅನುಮತಿ ರದ್ದು ಕೋರಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಹೋಗಿದ್ದು, ಮೂಂದೂಡಿಕೆಯಾಗಿದ್ದ ಅರ್ಜಿ ವಿಚಾರಣೆ ಆಗಸ್ಟ್ 29ರಂದು ಬರಲಿದೆ. ಅಲ್ಲಿವರೆಗೂ ಯಾವುದೇ ರೀತಿ ಕ್ರಮ ಕೈಗೊಳ್ಳಬಾರದೆಂದು ನ್ಯಾಯಾಲಯವು ನಿರ್ದೇಶಿಸಿತ್ತು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇದಕ್ಕೂ ಮುನ್ನ ಬುಲೆಟ್ ಪ್ರೂಫ್ ಇರುವ ಕಾರನ್ನು ಪಡೆದುಕೊಳ್ಳದೇ ಸಾಮಾನ್ಯ ಕಾರನ್ನೇ ಬಳಕೆ ಮಾಡುತ್ತಿದ್ದರು.