ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಲ್ದಾಣಗಳಲ್ಲಿ ಬೇರೆ ರಾಜ್ಯಗಳ ಹಾಲಿನ ಮಳಿಗೆ ಸ್ಥಾಪನೆ ವಿಚಾರ ಸಂಚಲನ ಮೂಡಿಸಿತ್ತು. ಇದೀಗ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಜಾಲವನ್ನು ವಿಸ್ತರಣೆ ಮಾಡುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಅವರಿಗೆ ಮಾಜಿ ಸಂಸದ ಡಿಕೆ ಸುರೇಶ್ ಅವರು ಮನವಿ ಸಲ್ಲಿಸಿ ಆಗ್ರಹಿಸಿದರು.

ಶನಿವಾರ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರನ್ನು ಡಿಕೆ ಸುರೇಶ್ ಅವರು ಭೇಟಿ ಮಾಡಿ ಕೆಲ ಹೊತ್ತು ಮಾತುಕತೆ ನಡೆಸಿದರು. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಜಾಲವನ್ನು ವಿಸ್ತರಿಸುವ ದೃಷ್ಟಿಯಿಂದ ಮೆಟ್ರೋ ನಿಲ್ದಾಣಗಳ ಮುಂಭಾಗದಲ್ಲಿ, ಇಲಾಖೆಗೆ ಸೇರಿದ ಖಾಲಿ ತೆರೆದ ಸ್ಥಳಗಳಲ್ಲಿ ನಂದಿನಿ ಪಾರ್ಲರ್ ನಿರ್ಮಿಸಬೇಕು. ಉತ್ಪನ್ನಗಳ ಮಾರಾಟ ಮಾಡಲು ಸ್ಥಳ ಮಂಜೂರಾತಿ ಕೋರಿ, ಮನವಿ ಸಲ್ಲಿಸಿದ್ದರ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಮ್ಮ ಮೆಟ್ರೋದಲ್ಲಿ ‘ನಂದಿನಿ’ಗೆ ಆದ್ಯತೆ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (KMF) ನಂದಿನಿ ಮಳಿಗೆ ತೆರೆಯುವಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ ಬೇರೆ ರಾಜ್ಯಗಳ ಅಮೂಲ್ ಇಲ್ಲಿಗೆ ಬರುವಂತಾಯಿತು ಎಂದೆಲ್ಲ ರಾಜ್ಯ ಸರ್ಕಾರ ಮತ್ತು ನಮ್ಮ ಮೆಟ್ರೋ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು. ಈ ನೆಲದ ರೈತರಿಗೆ, ಇಲ್ಲಿ ಉತ್ಪಾದನೆಗೆ ಉತ್ತೇಜನ ಸಿಗಬೇಕು ಎಂದು ಆಗ್ರಹಿಸಿದ್ದರು. ಬಳಿಕ ಕೆಎಂಎಫ್ ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ತೆರೆಯಲು ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಿದ್ದ ಡಿಕೆ ಶಿವಕುಮಾರ್ ಅವರು, ಕೂಡಲೇ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದರು. ಬಳಿಕ ಹತ್ತರಲ್ಲಿ ಎಂಟು ಮಳಿಗೆ ನಂದಿನಿ ಇರಲಿವೆ ಎಂದು ಸ್ಪಷ್ಟಪಡಿಸಿದ್ದರು.
ಇದೀಗ ನಂದಿನಿ ಮಳಿಗೆ, ನಂದಿನಿ ಹಾಲಿನ ಉತ್ಪನ್ನಗಳ ಮಾರಾಟಕ್ಕೆ, ಸ್ಥಳೀಯ ಉತ್ಪನ್ನಗಳ ಪ್ರೋತ್ಸಾಹ ಹಾಗೂ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಡಿಕೆ ಸುರೇಶ್ ಅವರು ಮೆಟ್ರೋ ನಿಲ್ದಾಣಗಳ ಮುಂದೆ ಖಾಲಿ ಇರುವ ಜಾಗಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದಷ್ಟು ಶೀಘ್ರವೇ ಈ ಬಗ್ಗೆ ತಿರ್ಮಾನ ಕೈಗೊಳ್ಳಲಾಗುವುದು ಎಂದು BMRCL ಎಂಡಿ ಸಕಾರಾತ್ಮಕ ಭರವಸೆ ನೀಡಿದ್ದಾರೆ.