ಪುರಿ: ಲಕ್ಷಾಂತರ ಮಂದಿ ಸೇರಿದ್ದ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಓರ್ವ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದರೆ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುರಿ ಜಗನ್ನಾಥ ರಥ ಯಾತ್ರೆ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಒಂದೆಡೆ ಸೇರುವ ದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿದೆ.
1971 ರಲ್ಲಿ ಹೊರತುಪಡಿಸಿ ಇದೇ ಮೊದಲ ಬಾರಿಗೆ 2 ದಿನಗಳ ಕಾಲ ರಥ ಯಾತ್ರೆ ನಡೆಯುತ್ತಿದ್ದು, ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪುರಿ ಜಗನ್ನಾಥ ರಥಯಾತ್ರೆ ಕಣ್ತುಂಬಿಕೊಳ್ಳುವುದಕ್ಕೆ ಪುರಿ ಕ್ಷೇತ್ರದಲ್ಲಿ ನೆರೆದಿದ್ದಾರೆ. ಸಾವನ್ನಪ್ಪಿದ ಭಕ್ತ ಉಸಿರುಗಟ್ಟಿದ ವಾತಾವರಣದಿಂದ ಮೃತಪಟ್ಟಿದ್ದಾನೆ, ಆದರೆ ಲಕ್ಷಾಂತರ ಮಂದಿ ಸೇರಿದ್ದರೂ ಕಾಲ್ತುಳಿತದಂತಯ ಯಾವುದೇ ಅನಾಹುತಗಳೂ ಸಂಭವಿಸಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.
ವಿಪರೀತ ಉಷ್ಣತೆ ಮತ್ತು ತೇವಾಂಶದಿಂದ ವ್ಯಕ್ತಿಯ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಅನಿರೀಕ್ಷಿತ ಸಂದರ್ಭಗಳನ್ನು ನಿಭಾಯಿಸುವುದಕ್ಕಾಗಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆ ಮತ್ತು ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.