ಜಾರ್ಖಂಡ್: 2018ರಲ್ಲಿ ನಡೆದ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಮಾನನಷ್ಟ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜಾರ್ಖಂಡ್ನ ಚೈಬಾಸಾದ ಸಂಸದ-ಶಾಸಕ ನ್ಯಾಯಾಲಯವು ಬುಧವಾರ ಜಾಮೀನು ನೀಡಿದೆ. ಇಂದು ಬೆಳಿಗ್ಗೆ 10.55ರ ಸುಮಾರಿಗೆ ರಾಹುಲ್ ಗಾಂಧಿ ನ್ಯಾಯಾಲಯದ ಮುಂದೆ ಹಾಜರಾದರು.
“ಜಾರ್ಖಂಡ್ ಹೈಕೋರ್ಟ್ ನಿರ್ದೇಶನದಂತೆ ರಾಹುಲ್ ಗಾಂಧಿ ನ್ಯಾಯಾಲಯದ ಮುಂದೆ ಹಾಜರಾದರು. ಅವರು ಜಾಮೀನು ಕೋರಿದ್ದರು. ಮಾನನಷ್ಟ ಪ್ರಕರಣದಲ್ಲಿ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ” ಎಂದು ರಾಹುಲ್ ಗಾಂಧಿಯವರ ವಕೀಲ ಪ್ರಣವ್ ದರಿಪಾ ಹೇಳಿದ್ದಾರೆ. ಈ ಮಾನನಷ್ಟ ಮೊಕದ್ದಮೆ 2018ರಲ್ಲಿ ದಾಖಲಾಗಿತ್ತು ಎಂದು ವಕೀಲರು ತಿಳಿಸಿದ್ದಾರೆ.
ಈ ಪ್ರಕರಣವನ್ನು ಆರಂಭದಲ್ಲಿ ರಾಂಚಿಯಲ್ಲಿ ದಾಖಲಿಸಲಾಗಿತ್ತು. 2021ರಲ್ಲಿ ಚೈಬಾಸಾಗೆ ವರ್ಗಾಯಿಸಲಾಯಿತು. ಹೈಕೋರ್ಟ್ ಮುಂದೆ ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗಲು ವಿನಾಯಿತಿ ನೀಡುವಂತೆ ನಾವು ಅರ್ಜಿ ಸಲ್ಲಿಸಿದ್ದೆವು. ಹೈಕೋರ್ಟ್ ನಿರ್ದೇಶನದ ಮೇರೆಗೆ ನಾವು ಈ ಕೋರ್ಟ್ಗೆ ಬಂದಿದ್ದೇವೆ. ನ್ಯಾಯಾಲಯವು ರಾಹುಲ್ ಗಾಂಧಿಯವರಿಗೆ ವಿಚಾರಣೆಯಲ್ಲಿ ಸಹಕರಿಸುವಂತೆ ಕೇಳಿಕೊಂಡಿದೆ” ಎಂದು ಅವರು ಹೇಳಿದ್ದಾರೆ.
ಜೂನ್ 26ರಂದು ಜಾರ್ಖಂಡ್ ಹೈಕೋರ್ಟ್ ಮುಂದೆ ಹಾಜರಾಗುವಂತೆ ಸೂಚಿಸಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಜೂನ್ 2ರಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯ ವಕೀಲರು ಜೂನ್ 10ರಂದು ತಮ್ಮ ಕಕ್ಷಿದಾರರು ನಿಗದಿತ ದಿನದಂದು ಕೋರ್ಟ್ ಮುಂದೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಹೈಕೋರ್ಟ್ಗೆ ತಿಳಿಸಿದ್ದರು. ಅದರ ಬದಲಿಗೆ ಆಗಸ್ಟ್ 6ರಂದು ಹಾಜರಾಗಲು ಅವಕಾಶ ನೀಡುವಂತೆ ಕೋರಿದ್ದರು. ಹೈಕೋರ್ಟ್ ಅವರ ಮನವಿಯನ್ನು ಅಂಗೀಕರಿಸಿತ್ತು.
2018ರಲ್ಲಿ ಚೈಬಾಸಾದಲ್ಲಿ ನಡೆದ ರ್ಯಾಲಿಯಲ್ಲಿ ಅಮಿತ್ ಶಾ ವಿರುದ್ಧ ಮಾನನಷ್ಟ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಪ್ರತಾಪ್ ಕುಮಾರ್ ಎಂಬ ವ್ಯಕ್ತಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಚೈಬಾಸಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಪ್ರತಾಪ್ ಕುಮಾರ್, ರಾಹುಲ್ ಗಾಂಧಿಯವರ ಹೇಳಿಕೆಗಳು ಮಾನನಷ್ಟಕರವಾಗಿದ್ದು, ಅಮಿತ್ ಶಾ ಅವರ ಸ್ಥಾನಮಾನಕ್ಕೆ ಕಳಂಕ ತರುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದ್ದರು.
For More Updates Join our WhatsApp Group :