ನವದೆಹಲಿ: ‘ವಿದೇಶಗಳಲ್ಲಿ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಭಾರತದ ಪ್ರಜಾಪ್ರಭುತ್ವಕ್ಕೆ ಅವರು ಕಪ್ಪು ಚುಕ್ಕೆಯಾಗಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಕಿಡಿಕಾರಿದರು.
ಅಮೆರಿಕದ ಟೆಕ್ಸಾಸ್ನಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣವನ್ನು ಪ್ರಸ್ತಾಪಿಸಿ ಮಾತನಾಡಿರುವ ಅವರು, ‘ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ, ಅರೆಕಾಲಿಕ ನಾಯಕ ಎಂಬುವುದು ಎಲ್ಲರಿಗೂ ತಿಳಿದಿದೆ. ಆದರೆ, ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾದ ಮೇಲೆ ಜನರು ಅವರ ಮೇಲೆ ಅತಿದೊಡ್ಡ ಜವಾಬ್ದಾರಿ ಹೊರಿಸಿದ್ದಾರೆ’ ಎಂದು ಹೇಳಿದರು.
‘ರಾಹುಲ್ ಗಾಂಧಿ ಭಾರತೀಯ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದು ಹೇಳಲು ನನಗೆ ಬೇಸರವಾಗಿದೆ. ವಿದೇಶಕ್ಕೆ ಭೇಟಿ ನೀಡಿದಾಗಲೆಲ್ಲ ಅಲ್ಲಿ ಏನು ಮಾತನಾಡಬೇಕು ಎಂಬುದು ಅವರಿಗೆ ತಿಳಿದಿಲ್ಲ’ ಎಂದು ವ್ಯಂಗ್ಯ ಮಾಡಿದರು.
‘ಯುಪಿಎ ಅವಧಿಯಲ್ಲಿ ಚೀನಾದೊಂದಿಗೆ ಮಾಡಿಕೊಂಡ ಒಪ್ಪಂದದ(MoU- ತಿಳಿವಳಿಕೆಯ ಜ್ಞಾಪಕ ಪತ್ರ) ಫಲಿತಾಂಶವಾಗಿ ಚೀನಾದ ವಿರುದ್ಧ ರಾಹುಲ್ ಒಂದೇ ಒಂದು ಹೇಳಿಕೆ ನೀಡಿಲ್ಲ. ಚೀನಾದ ಪರ ನಿಲ್ಲುವ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಯತ್ನಿಸಿದ್ದಾರೆ. ನನ್ನ ಹೇಳಿಕೆ ತಪ್ಪಾಗಿದ್ದರೆ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಎಂಒಯುವನ್ನು ಬಹಿರಂಗೊಳಿಸಲಿ’ ಎಂದು ಸವಾಲು ಹಾಕಿದರು.
ಇಂದು ಟೆಕ್ಸಾಸ್ನಲ್ಲಿ ಇಂಡೊ-ಅಮೆರಿಕನ್ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್, ಆರ್ಎಸ್ಎಸ್ ಮತ್ತು ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದರು. ‘ಆರ್ಎಸ್ಎಸ್ ಭಾರತದ ಬಗ್ಗೆ ಏಕ ಪರಿಕಲ್ಪನೆ ಹೊಂದಿದ್ದರೆ, ನಾವು ಬಹುವಿಧದ ವಿಚಾರಗಳ ಬಗ್ಗೆ ನಂಬಿಕೆ ಇಟ್ಟಿದ್ದೇವೆ’ ಎಂದಿದ್ದರು.