ಅಯೋಧ್ಯೆಯಲ್ಲಿ ಬಿಜೆಪಿ ಸೋಲಿನ ರಹಸ್ಯ ಬಿಚ್ಚಿಟ್ಟ ರಾಹುಲ್ ಗಾಂಧಿ

ಅಮೇಥಿ, ಉತ್ತರಪ್ರದೇಶ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆ ಉತ್ತರಪ್ರದೇಶದಲ್ಲಿ ಭಾರಿ ಕುಸಿತ ಕಂಡಿದೆ. ಅಷ್ಟೇ ಅಲ್ಲ ಮ್ಯಾಜಿಕ್​ ನಂಬರ್​​​​​ ಅನ್ನು ಏಕಾಂಗಿಯಾಗಿ ಮುಟ್ಟಲು ವಿಫಲವಾಯ್ತು. ಇಲ್ಲಿ ಕಳೆದ ಬಾರಿ 80 ಸ್ಥಾನಗಳಲ್ಲಿ 62 ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ ಕೇವಲ 33 ಸ್ಥಾನಗಳಿಗೆ ಕುಸಿತ ಕಂಡಿದೆ. ಕಳೆದ ಬಾರಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟಿದ್ದ ಕಾಂಗ್ರೆಸ್​ ತನ್ನ ಸ್ಥಾನಗಳನ್ನು ಆರಕ್ಕೆ ಹೆಚ್ಚಿಸಿಕೊಂಡಿದೆ. ಎಸ್​​​ಪಿ 37 ರಲ್ಲಿ ಜಯ ಸಾಧಿಸಿದೆ. ಈ ಯಶಸ್ಸಿನಿಂದ ಸಂತಸಗೊಂಡಿರುವ ರಾಹುಲ್ ಗಾಂಧಿ ಮಂಗಳವಾರ ಸಹೋದರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಅಮೇಥಿಯ ಜನತೆಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಯೋಧ್ಯೆಯಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣಗಳನ್ನು ಬಿಚ್ಚಿಟ್ಟರು.

ತಮ್ಮ ಭಾಷಣದಲ್ಲಿ ಬಿಜೆಪಿಯನ್ನು ಟಾರ್ಗೆಟ್ ಮಾಡಿದ ರಾಹುಲ್ ಗಾಂಧಿ, ಕೇಸರಿ ಪಕ್ಷದ ನಾಯಕರು ಎಲ್ಲೆಲ್ಲಿ ದ್ವೇಷವನ್ನು ಹರಡುತ್ತಾರೆ, ಅಲ್ಲಲ್ಲಿ ನಾವು ಪ್ರೀತಿಯ ಅಂಗಡಿಯನ್ನು ತೆರೆಯಬೇಕಾಗುತ್ತದೆ ಎಂದು ಹೇಳಿದರು. ಇದೇ ವೇಳೆ, ಅಯೋಧ್ಯೆ ಕ್ಷೇತ್ರದಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿರುವುದನ್ನು ಪ್ರಸ್ತಾಪಿಸಿದರು. ರಾಮಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಅದ್ದೂರಿಯಾಗಿ ಮಂದಿರ ಉದ್ಘಾಟನೆಯೂ ನಡೆದಿದೆ. ಆದರೆ, ಈ ಉದ್ಘಾಟನೆ ಸಮಾರಂಭದಲ್ಲಿ ಒಬ್ಬನೇ ಒಬ್ಬ ಬಡ, ರೈತ, ದಲಿತ ಅಥವಾ ಕಾರ್ಮಿಕ ಇರಲಿಲ್ಲ. ರಾಷ್ಟ್ರಪತಿಗಳಿಗೂ ಅವಕಾಶ ಇರಲಿಲ್ಲ. ಆದಿವಾಸಿಗಳು ಎಂದು ಅವರನ್ನು ಸಮಾರಂಭದಿಂದ ದೂರ ಇಡಲಾಯಿತು ಎನ್ನುವ ಮೂಲಕ ಹಲವು ಕಾರಣಗಳನ್ನು ರಾಹುಲ್​ ಗಾಂಧಿ ಪಟ್ಟಿ ಮಾಡಿದರು.

ಅದಾನಿ-ಅಂಬಾನಿ, ಕ್ರಿಕೆಟ್ ತಂಡ, ಇಡೀ ಬಾಲಿವುಡ್ ಮಂದಿ ಮಂದಿರ ಉದ್ಘಾಟನೆ ವೇಳೆ ನಿಂತಿದ್ದರು. ಆದರೆ ಒಬ್ಬ ಬಡವನೂ ನಿಂತಿರಲಿಲ್ಲ. ಅದಕ್ಕೆ ಅಯೋಧ್ಯೆಯ ಜನ ಚುನಾವಣೆ ಮೂಲಕ ಉತ್ತರವನ್ನೂ ನೀಡಿದ್ದಾರೆ. ಅಯೋಧ್ಯೆಯಲ್ಲಿ ಮಾತ್ರವಲ್ಲ ವಾರಾಣಸಿಯಲ್ಲೂ ಪ್ರಧಾನಿಗೆ ಕಡಿಮೆ ಅಂತರದಲ್ಲಿ ಗೆಲುವು ನೀಡಿದ್ದಾರೆ. ಭಾರಿ ಸೋಲನ್ನು ಅಲ್ಲಿನ ಜನ ಸ್ವಲ್ಪದರಲ್ಲೇ ತಪ್ಪಿಸಿದ್ದಾರೆ ಎಂದು ಪ್ರಧಾನಿ ವಿರುದ್ಧ ರಾಹುಲ್​ ವಾಗ್ದಾಳಿ ನಡೆಸಿದರು. ನನ್ನ ಸಹೋದರಿ ವಾರಾಣಸಿಯಲ್ಲಿ ಹೋರಾಟ ಮಾಡಿದ್ದರೆ ಭಾರತದ ಪ್ರಧಾನಿ ಎರಡರಿಂದ ಮೂರು ಲಕ್ಷ ಮತಗಳಿಂದ ಸೋಲುತ್ತಿದ್ದರು ಎಂದು ಟಾಂಗ್​​ ನೀಡಿದರು.

Leave a Reply

Your email address will not be published. Required fields are marked *