ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆಯ ಎಂ.ವಿ.ಪ್ರಕಾಶ್ ನೇಯ್ದ ‘ರೈನ್ ಬೋ ಕಲಾಂಜಲಿ’ ರೇಷ್ಮೆ ಸೀರೆಗೆ ರಾಜ್ಯ ಸರ್ಕಾರ ರಾಜ್ಯಮಟ್ಟದ ಪ್ರಥಮ ಬಹುಮಾನ ಫೋಷಿಸಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಹಲವು ದಶಕಗಳಿಂದ ಉತ್ತಮ ಗುಣಮಟ್ಟದ ಕೈಮಗ್ಗ ರೇಷ್ಮೆ ಸೀರೆಗಳಿಗೆ ವೈ.ಎನ್.ಹೊಸಕೋಟೆ ಹೆಸರುವಾಸಿ. ಇಲ್ಲಿನ ನೇಕಾರ ಎಂ.ವಿ.ಪ್ರಕಾಶ್ ಆಕರ್ಷಕ ರೇಷ್ಮೆ ಸೀರೆ ನೇಯುವ ಮೂಲಕ 2024-25ನೇ ಸಾಲಿನ ರಾಜ್ಯಮಟ್ಟದ ಉತ್ತಮ ನೇಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೈಮಗ್ಗ ಮತ್ತು ಜವಳಿ ಇಲಾಖೆಯು ಪ್ರತಿವರ್ಷ ರಾಜ್ಯಮಟ್ಟದಲ್ಲಿ ಉತ್ತಮ ನೇಕಾರರನ್ನು ಗುರ್ತಿಸಿ ಪ್ರಶಸ್ತಿ ನೀಡುತ್ತಿದೆ. ಆಗಸ್ಟ್ 7ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಪತ್ರ, ಫಲಕ ಮತ್ತು 25 ಸಾವಿರ ನಗದನ್ನು ಪ್ರಶಸ್ತಿ ಒಳಗೊಂಡಿದೆ. ಹಾಗೂ ತಿಂಗಳಿಗೆ 8 ಸಾವಿರದಂತೆ ವಾರ್ಷಿಕ 96 ಸಾವಿರ ಮಾಸಾನವನ್ನು ಪ್ರಶಸ್ತಿ ವಿಜೇತರಿಗೆ ಜೀವಿತಾವಧಿಯವರೆಗೆ ನೀಡಲಾಗುತ್ತದೆ.
ಈ ಸೀರೆ ನೇಯಲು ಎರಡು ತಿಂಗಳು ಬೇಕಾಗುತ್ತದೆ. ಜೊತೆಗೆ 21 ಲಾಳಿಗಳ ಪೈಕಿ ಒಂದರಲ್ಲಿ ಬೆಳ್ಳಿ ಜರಿ, ಮತ್ತೊಂದರಲ್ಲಿ ಒನ್ ಗ್ರಾಂ ಗೋಲ್ಡ್ ಜರಿ ಸೇರಿದಂತೆ ವಿವಿಧ ಬಣ್ಣಗಳ ರೇಷ್ಮೆ ನೂಲು ಇರುತ್ತದೆ. ಸುಂದರವಾದ ಬಳ್ಳಿ, ರೈನ್ ಬೋ ಬಣ್ಣ, ಆನೆ, ನವಿಲುಗಳಿಂದ ಕೂಡಿ ಚಿತ್ತಾಕರ್ಷಕವಾಗಿ ಸೀರೆ ಮೂಡಿ ಬಂದಿದೆ.
ಪ್ರಕಾಶ್ ನೇಯ್ದ ರೇಷ್ಮೆ ಸೀರೆ 6.30 ಮೀಟರ್ ಉದ್ದ, 49 ಇಂಚು ಅಗಲವಿದ್ದು, 850 ಗ್ರಾಂ ತೂಕವಿದೆ. ಈ ಸೀರೆಯ ಬೆಲೆ 85ಸಾವಿರ ಎಂದು ಅಂದಾಜಿಸಲಾಗಿದೆ. 2023ನೇ ಸಾಲಿನಲ್ಲಿ ಗ್ರಾಮದ ಎಂ.ಜಯಕೀರ್ತಿ ಅವರು ನೇಕಾರಿಕೆ ಮಾಡಿದ್ದ ರೈಸಿಂಗ್ ಬ್ರೊಕೆಟ್ ಸೀರೆಗೆ ಪ್ರಥಮ ಬಹುಮಾನದೊಂದಿಗೆ ರಾಜ್ಯಮಟ್ಟದ ಬಹುಮಾನ ಪಡೆದಿದದ್ದರು