ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆ. ಭಾರತದ ಹಲವು ಪ್ರಮುಖ ನಗರಗಳಲ್ಲಿ ಮೊದಲ ದಿನದ ಬಹುತೇಕ ಶೋಗಳು ಹೌಸ್ಫುಲ್ ಆಗಿವೆ. ಕೆಲವು ಕಂಪೆನಿಗಳು ಸಿಬ್ಬಂದಿಗೆ ರಜೆ ನೀಡಿ ಸಿನಿಮಾ ನೋಡಲು ಸಹಕರಿಸಿವೆ. ಸಿಂಗಪುರದಲ್ಲೂ ಸಹ ಕೆಲ ಕಂಪೆನಿಗಳು ಸಿಬ್ಬಂದಿಗೆ ರಜೆ ನೀಡಿವೆ.
ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾದ ಹವಾ ಬಲು ಜೋರಾಗಿ ಹಬ್ಬಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಅಡ್ವಾನ್ಸ್ ಬುಕಿಂಗ್ ಬಲು ಜೋರಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಇನ್ನೂ ಕೆಲವು ಪ್ರಮುಖ ನಗರಗಳಲ್ಲಿ ಈಗಾಗಲೇ ಮೊದಲ ದಿನದ 75% ಶೋಗಳು ಹೌಸ್ ಫುಲ್ ಆಗಿವೆ. ಅಂದಹಾಗೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ‘ಕೂಲಿ’ ಹವಾ ಬಲು ಜೋರಾಗಿಯೇ ಇದೆ.
ರಜನೀಕಾಂತ್ ಭಾರತದಲ್ಲಿ ಮಾತ್ರ ಸ್ಟಾರ್ ಅಲ್ಲ, ಅವರ ಅಭಿಮಾನಿಗಳು ವಿಶ್ವದೆಲ್ಲೆಡೆ ಇದ್ದಾರೆ. ಭಾರತದಲ್ಲಿ ಕೆಲವು ಕಂಪೆನಿಗಳು ರಜನೀಕಾಂತ್ರ ಸಿನಿಮಾಕ್ಕಾಗಿ ಈಗಾಗಲೇ ರಜೆಯನ್ನೇ ಘೋಷಿಸಿಬಿಟ್ಟಿವೆ. ರಜನಿಯ ಹವಾ ಎಷ್ಟಿದೆಯೆಂದರೆ ವಿದೇಶದಲ್ಲೂ ಸಹ ಕೇವಲ ‘ಕೂಲಿ’ ಸಿನಿಮಾ ವೀಕ್ಷಿಸಲೆಂದು ಕಂಪೆನಿಗಳು ತಮ್ಮ ಎಲ್ಲ ಸಿಬ್ಬಂದಿಗೆ ರಜೆ ಘೋಷಣೆ ಮಾಡಿದೆ.
ಹೌದು, ಸಿಂಗಪುರದ ಕೆಲ ಕಂಪೆನಿಗಳು ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ಬಿಡುಗಡೆ ಆಗುವ ದಿನದಂದು ತಮ್ಮ ಸಿಬ್ಬಂದಿಗೆ ರಜೆ ನೀಡಿವೆ. ಸಿಂಗಪುರದ ಫಾರ್ಮರ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಮತ್ತು ಎಸ್ಬಿ ಮಾರ್ಟ್ ಹೆಸರಿನ ಕಂಪೆನಿಗಳು ಆಗಸ್ಟ್ 14 ರಂದು ತಮ್ಮ ಸಿಬ್ಬಂದಿಗೆ ರಜೆ ನೀಡಿವೆ. ಈ ಬಗ್ಗೆ ಸರ್ಕ್ಯುಲರ್ (ಸುತ್ತೋಲೆ) ಅನ್ನು ಸಹ ಹೊರಡಿಸಿವೆ.
ಸಿಂಗಪುರದ ಫಾರ್ಮರ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತನ್ನ ತಮಿಳು ಸಿಬ್ಬಂದಿಗೆ ಆಗಸ್ಟ್ 14 ರಂದು ಸಂಬಳ ಸಹಿತ ರಜೆಯನ್ನು ಘೋಷಣೆ ಮಾಡಿದೆ. ರಜನೀಕಾಂತ್ ಅವರ ‘ಕೂಲಿ’ ಸಿನಿಮಾ ವೀಕ್ಷಿಸಲೆಂದೇ ಈ ರಜೆ ನೀಡುತ್ತಿರುವುದಾಗಿ ಸರ್ಕ್ಯುಲರ್ನಲ್ಲಿ ಉಲ್ಲೇಖಿಸಿದೆ. ಇನ್ನು ಎಸ್ಬಿ ಮಾರ್ಟ್ ಎನ್ನುವ ಮಳಿಗೆ ಸಹ ‘ಕೂಲಿ’ ಸಿನಿಮಾ ಬಿಡುಗಡೆ ಇರುವ ಕಾರಣ ಅರ್ಧ ದಿನ ರಜೆ ಘೋಷಣೆ ಮಾಡಿದೆ. ‘ಕೂಲಿ’ ಸಿನಿಮಾ ಬಿಡುಗಡೆ ಕಾರಣ, ಆಗಸ್ಟ್ 14 ರಂದು ಮಳಿಗೆಯು ಬೆಳಿಗ್ಗೆ 7 ರಿಂದ 11:45ತ ವರೆಗೆ ಮುಚ್ಚಲ್ಪಟ್ಟಿರುತ್ತದೆ ಎಂದು ಸುತ್ತೋಲೆ ಹೊರಡಿಸಿದೆ.
ಇನ್ನು ಭಾರತದಲ್ಲಿ ವಿಶೇಷವಾಗಿ ಚೆನ್ನೈನಲ್ಲಿ ಕೆಲವು ಖಾಸಗಿ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ‘ಕೂಲಿ’ ಸಿನಿಮಾ ವೀಕ್ಷಿಸಲು ವಿಶೇಷ ರಜೆಯನ್ನು ಮಂಜೂರು ಮಾಡಿವೆ. ರಜನೀಕಾಂತ್ ಅವರ ಸಿನಿಮಾಗಳು ಬಿಡುಗಡೆ ಆಗುವಾಗ ಹೀಗೆ ಕಂಪೆನಿಗಳು ರಜೆ ನೀಡುವುದು ಸಾಮಾನ್ಯ. ಈ ಹಿಂದೆ ರಜನೀಕಾಂತ್ ಅವರ ‘ಕಬಾಲಿ’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿಯೂ ಸಹ ಹೀಗೆ ಹಲವು ಕಂಪೆನಿಗಳು ವಿಶೇಷ ರಜೆಯನ್ನು ಮಂಜೂರು ಮಾಡಿದ್ದವು. ‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗುತ್ತಿದೆ.
For More Updates Join our WhatsApp Group :