ಬೆಂಗಳೂರು : ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಬ್ಯಾಚುಲರ್ಸ್ ಪಾರ್ಟಿ ಸಿನೆಮಾದಲ್ಲಿ ಎರಡು ಹಾಡುಗಳನ್ನು ಬಳಸಿ ಕಾಪಿರೈಟ್ಸ್ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ನಟ ರಕ್ಷಿತ್ ಶೆಟ್ಟಿ ಅವರು ಯಶವಂತಪುರ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು.
ವಿಚಾರಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಪಿರೈಟ್ ಬಗ್ಗೆ ಇಂಡಸ್ಟ್ರಿಯಲ್ಲಿ ನಾಲೆಡ್ಜೇ ಇಲ್ಲ. ನನ್ನ ಪ್ರಕಾರ, ಕಾಪಿರೈಟ್ ಉಲ್ಲಂಘನೆ ಅಲ್ಲ. ಈ ಸಿನಿಮಾಗೂ ಮುನ್ನ ಆ ಹಾಡುಗಳನ್ನು ಬಳಸಲು ಅನುಮತಿಗಾಗಿ ಎಂಆರ್ಟಿ ಮ್ಯೂಸಿಕ್ ಸಂಸ್ಥೆ ಅವರ ಬಳಿ ಮಾತನಾಡಿದಾಗ, ಹೆಚ್ಚಿನ ಮೊತ್ತ ಕೇಳಿದ್ದರು. ಅಷ್ಟು ದೊಡ್ಡ ಅಮೌಂಟ್ ಕೊಡೋಕೆ ನಮಗೆ ಸರಿ ಎನಿಸಲಿಲ್ಲ. ಆಮೇಲೆ ಅವರು ಹೇಳ್ತೀವಿ ಅಂತ ಆ ಮಾತುಕತೆ ಅಲ್ಲೇ ನಿಂತು ಹೋಯಿತು. ಈ ಸಿನಿಮಾದ ರಿಲೀಸ್ ನಂತರ ಅವರು ಕೇಸ್ ಹಾಕಿದ್ದಾರೆ ಎಂದಿದ್ದಾರೆ.
ಕನ್ನಡದ ಹಾಡನ್ನು ಕನ್ನಡ ಚಿತ್ರದಲ್ಲಿ ಬಳಕೆ ಮಾಡುವಂತೆಯೇ ಇಲ್ವಾ ಎಂದು ನಟ ಪ್ರಶ್ನಿಸಿದ್ದಾರೆ. ಕೊಟ್ಟಿರುವ ಕಂಪ್ಲೆಂಟ್ಗೆ ನಾನು ಕೂಡ ಕೋರ್ಟ್ನಲ್ಲಿ ಫೈಟ್ ಮಾಡ್ತೀನಿ ಎಂದಿದ್ದಾರೆ. ಸಾಂಧರ್ಬಿಕವಾಗಿ ಹಾಡು ಬಳಕೆಯಾಗಿದೆ ಅಷ್ಟೆ. ಕಾಪಿರೈಟ್ ಆಕ್ಟ್ ಏನು ಹೇಳುತ್ತೆ ಎಂಬುದನ್ನು ಕೋರ್ಟ್ನಲ್ಲಿ ನೋಡೋಣ. ನ್ಯಾಯಾಲಯ ತೀರ್ಮಾನ ಮಾಡಲಿ. ಈ ಬಗ್ಗೆ ನಮಗೂ ಯಾವುದೂ ಬಳಸಬೇಕು ಯಾವುದು ಬಳಸಬಾರದು ಅಂತ ಅರ್ಥವಾಗಲಿ ಎಂದು ತಿಳಿಸಿದರು.
ಜುಲೈ 15ರಂದು ರಕ್ಷಿತ್ ಶೆಟ್ಟಿ ವಿರುದ್ಧ ಎಂಆರ್ಟಿ ಮ್ಯೂಸಿಕ್ ಪಾಲುದಾರರಾಗಿರುವ ನವೀನ್ ಕುಮಾರ್ ದೂರು ನೀಡಿದ್ದರು. ನ್ಯಾಯ ಎಲ್ಲಿದೆ ಚಿತ್ರದ `ನ್ಯಾಯ ಎಲ್ಲಿದೆ’ ಹಾಡು ಮತ್ತು ಗಾಳಿ ಮಾತು ಚಿತ್ರದ ‘ಒಮ್ಮೆ ನಿನ್ನನ್ನು’ ಅನಧಿಕೃತವಾಗಿ ಹಾಡು ಬಳಕೆ ಮಾಡಿದ ಆರೋಪದಲ್ಲಿ ಪರಮ್ವಾ ಸ್ಟುಡಿಯೋಸ್ ಮತ್ತು ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಾಗಿತ್ತು.