‘ರಾಮಾಯಣ’. ಭಾರತೀಯ ಚಿತ್ರರಂಗದ ಮಹತ್ವಾಕಾಂಕ್ಷೆಯ ಸಿನಿಮಾ. ಈ ಚಿತ್ರದಲ್ಲಿ ಬಹುಬೇಡಿಕೆಯ ತಾರೆಯರಾದ ಯಶ್, ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ತೆರೆ ಹಂಚಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ಮುಂದಿನ ಬಹುನಿರೀಕ್ಷಿತ ಚಿತ್ರಗಳ ಲಿಸ್ಟ್ನಲ್ಲಿ ಅಗ್ರ ಕ್ರಮಾಂಕದಲ್ಲಿದೆ. ಸಿನಿಮಾ ಮೇಲಿನ ಕುತೂಹಲ, ನಿರೀಕ್ಷೆ ಮತ್ತು ಉತ್ಸಾಹ ಶಿಖರದಷ್ಟಿದೆ. ಚಿತ್ರದ 3 ನಿಮಿಷಗಳ ಮೊದಲ ನೋಟ ಇಂದು ರಿಲೀಸ್ ಆಗಿದ್ದು, ಆರಂಭಿಕ ಪ್ರತಿಕ್ರಿಯೆಗಳು ಉತ್ತಮವಾಗಿವೆ.

ಚಿತ್ರದಲ್ಲಿ ರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್, ಹನುಮಾನ್ ಆಗಿ ಸನ್ನಿ ಡಿಯೋಲ್, ಲಕ್ಷ್ಮಣನಾಗಿ ರವಿ ದುಬೆ ಮತ್ತು ಲಾರಾ ದತ್ತಾ, ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ.
ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಬೆಂಗಳೂರು ಸೇರಿ ಭಾರತದ 9 ಪ್ರಮುಖ ನಗರಗಳಲ್ಲಿ ಈ ಗ್ಲಿಂಪ್ಸ್ ಅನ್ನು ಇಂದು ಬಿಡುಗಡೆ ಮಾಡಲಾಯಿತು. ಇದು ಪ್ರೇಕ್ಷಕರಿಗೆ ರಾಮಾಯಣ ಪ್ರಪಂಚದ ಮೊದಲ ಅಧಿಕೃತ ಅದ್ಭುತ ನೋಟವನ್ನೊದಗಿಸಿದೆ. ವರದಿಗಳ ಪ್ರಕಾರ, 835 ಕೋಟಿ ರೂ. ಬಿಗ್ ಬಜೆಟ್‌ನೊಂದಿಗೆ ಬೃಹತ್ ಪ್ರಮಾಣದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿರುವ ಹಿನ್ನೆಲೆ, ರಾಮಾಯಣ ಈಗಾಗಲೇ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ದುಬಾರಿ ಚಿತ್ರವಾಗಿ ಸ್ಥಾನ ಪಡೆದಿದೆ. ಸದ್ಯ ಸದ್ದು ಮಾಡುತ್ತಿರುವ ವಿಡಿಯೋ ಪ್ರೇಕ್ಷಕರಿಗೆ ಅದ್ಭುತ ಸಿನಿಮೀಯ ಅನುಭವ ಕೊಡುವ ಭರವಸೆ ನೀಡಿದೆ.
ಬ್ರಹ್ಮ, ವಿಷ್ಣು ಮತ್ತು ಶಿವನ ನೋಟದೊಂದಿಗೆ ಆರಂಭವಾದ ಟೀಸರ್, ಕಥೆಯ ರಾಮ vs ರಾವಣನ ಮುಖಾಮುಖಿಯನ್ನು ತೋರಿಸಿದೆ. ಮೂರು ನಿಮಿಷಗಳ ಕಾಲಾವಧಿಯವರೆಗೆ ಮಹಾಕಾವ್ಯದ ಅದ್ಭುತ ದೃಶ್ಯ ಅನುಭವವನ್ನು ನೀಡಿದೆ. ಗ್ಲೋಬಲ್ ಮ್ಯೂಸಿಕ್ ಲೆಜೆಂಡ್ಗಳಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್.ರೆಹಮಾನ್ ಅವರ ಪವರ್ಫುಲ್ ಹಿನ್ನೆಲೆ ಸಂಗೀತ ದೃಶ್ಯಗಳ ತೂಕ ಹೆಚ್ಚಿಸಿದೆ. ಬಾಕ್ಸ್ ಆಫೀಸ್ ಧೂಳೆಬ್ಬಿಸೋ ಭರವಸೆಯನ್ನು ಈ ಗ್ಲಿಂಪ್ಸ್ ಕೊಟ್ಟಿದೆ.
