ಸಂಧ್ಯಾ ಅರಕೆರೆ ಹೆಸರು ಈಗ ಎಲ್ಲ ಕಡೆಗಳಲ್ಲಿ ಪ್ರಚಲಿತದಲ್ಲಿದೆ. ಇದಕ್ಕೆ ಕಾರಣ ರಾಜ್ ಬಿ. ಶೆಟ್ಟಿ ಅವರ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ. ಈ ಚಿತ್ರದಲ್ಲಿ ಭಾನು ಹೆಸರಿನ ಪಾತ್ರದಲ್ಲಿ ಸಂಧ್ಯಾ ನಟಿಸಿದ್ದಾರೆ. ಇಡೀ ಸಿನಿಮಾದ ದಿಕ್ಕನ್ನೇ ಇವರು ಬದಲಿಸುತ್ತಾರೆ ಎಂದರೂ ತಪ್ಪಾಗಲಾರದು. ರಂಗಭೂಮಿ ಹಿನ್ನೆಲೆ ಹೊಂದಿರುವ ಇವರು ಸಿನಿಮಾ ರಂಗಕ್ಕೆ ಬಂದಿದ್ದೇ ಆಕಸ್ಮಿಕ. ಅವರು ರಂಗಭೂಮಿ, ಸಿನಿಮಾ ಹಾಗೂ ‘ಸು ಫ್ರಮ್ ಸೋ’ ಜರ್ನಿ ಬಗ್ಗೆ ಮಾತನಾಡಿದ್ದಾರೆ.
ಟೋಬಿಯಲ್ಲಿ ನಟನೆ
ರಾಜ್ ಬಿ. ಶೆಟ್ಟಿ ಪರಿಚಯ ಬೆಳೆದಿದ್ದು ಹೇಗೆ ಎಂಬುದನ್ನು ಸಂಧ್ಯಾ ವಿವರಿಸಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದೆ. ನಂತರ ಟೋಬಿ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಮತ್ತೆ ಆ ತಂಡದಿಂದ ಮತ್ತೆ ಆಫರ್ ಬರುತ್ತದೆ ಎಂದುಕೊಂಡಿರಲಿಲ್ಲ. ರಾಜ್ ಅವರು ನನಗೆ ಈ ಆಫರ್ ಕೊಟ್ಟರು. ನಾನು ಖುಷಿಯಿಂದ ಒಪ್ಪಿ ನಟಿಸಿದೆ’ ಎನ್ನುತ್ತಾರೆ ಸಂಧ್ಯಾ.
ಎಲ್ಲ ಕ್ರೆಡಿಟ್ ನಿರ್ದೇಶಕರಿಗೆ ಭಾನು ಆಗಿ ತೆರೆಮೇಲೆ ಏನೇ ಬಂದಿದ್ದರೂ ಅದರ ಕ್ರೆಡಿಟ್ ನಿರ್ದೇಶಕ ಜೆಪಿ ತುಮಿನಾಡ್ಗೆ ಸಲ್ಲುತ್ತದೆ. ಅವರು ಪಾತ್ರವನ್ನು ಬರೆದು ಜೀವಿಸಿದವರು. ಅವರು ಹೇಳಿದಂತೆ ನಟಿಸಿದ್ದೇನೆ. ರಾಜ್ ಬಿ ಶೆಟ್ಟಿ ಅವರಿಗೆ ನಾನು ಈ ಪಾತ್ರಕ್ಕೆ ಸೂಕ್ತ ಅನಿಸಿತು. ಅವರಿಗೆ ನಾನು ಸೂಕ್ತ ಅಲ್ಲ ಎಂದು ಅನಿಸಿದ್ದರೆ ನನಗೆ ಈ ಕಥೆಯನ್ನು ಕೇಳಲು ಸಾಧ್ಯವೇ ಆಗುತ್ತಿರಲಿಲ್ಲ. ಅವರಿಗೂ ಧನ್ಯವಾದ ಹೇಳಬೇಕು. ಪಾತ್ರ ಕೇಳುವಾಗ ಮೈ ಜುಂ ಎಂದಿತ್ತು. ಜೆಪಿ ಅವರು ನರೇಟ್ ಮಾಡುವಾಗ ಅವರೇ ಭಾನು ಎನ್ನುವ ರೀತಿ ಅನಿಸುತ್ತಿತ್ತು. ನಂಗೆ ಗಂಟಲು ಕಟ್ಟುತ್ತಿತ್ತು’ ಎಂದಿದ್ದಾರೆ ಸಂಧ್ಯಾ.
ಅರಕೆರೆ ನನ್ನೂರು ‘ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅರಕೆರೆ ನನ್ನೂರು. ಸಿನಿಮಾ ಮಾಡುವ ಯಾವುದೇ ಆಲೋಚನೆ ನನಗೆ ಇರಲಿಲ್ಲ. ಅರ
ಕೆರೆಯಲ್ಲಿ ಪಿಯುಸಿ ಮಾಡಿದೆ. ಮೈಸೂರಿನಲ್ಲಿ ಡಿಗ್ರಿ ಮಾಡಿದೆ. ನಂತರ ನೀನಾಸಂ ಸೇರಿದೆ. 2015ರಲ್ಲಿ ಥಿಯೇಟರ್ನಲ್ಲಿ ಎಂಎ ಮಾಡಬೇಕು ಎಂದು ಬೆಂಗಳೂರಿಗೆ ಬಂದಿದ್ದೆ. ಆಗ ಒಂದು ಸಿನಿಮಾಗೆ ಅವಕಾಶ ಸಿಕ್ಕಿತ್ತು. ನಂತರ ಸಾಲು ಸಾಲು ಸಿನಿಮಾ ಆಫರ್ಗಳು ಬಂದವು’ ಎಂದು ಖುಷಿಯಿಂದ ಹೇಳುತ್ತಾರೆ ಸಂಧ್ಯಾ.
ಯಾವುದೂ ಪ್ಲ್ಯಾನ್ ಮಾಡಿದ್ದಲ್ಲ..
ಒಂದು ಸಿನಿಮಾ ಹಿಟ್ ಆದರೆ ಮುಂದೆ ಸಾಲು ಸಾಲು ಆಫರ್ಗಳು ಬರುತ್ತವೆ. ಸಂಧ್ಯಾ ಆ ಬಗ್ಗೆ ಯೋಚಿಸಿಲ್ಲ. ‘ಜೀವನದಲ್ಲಿ ನಾನು ಪ್ಲ್ಯಾನ್ ಮಾಡಿ ಏನನ್ನೂ ಮಾಡಿಲ್ಲ. ಅದಾಗಿಯೇ ಆಗುತ್ತಿದೆ. ನಾನು ನಾಟಕಕ್ಕೆ ಬಂದಿದ್ದು ಆಕಸ್ಮಿಕ, ಸಿನಿಮಾ ಆಫರ್ ಬಂದಿದ್ದೂ ಆಕಸ್ಮಿಕ. ಸು ಫ್ರಮ್ ಸೋ ಚಿತ್ರಕ್ಕೆ ಇಷ್ಟು ದೊಡ್ಡ ಗೆಲುವು ಸಿಗುತ್ತದೆ ಎಂದು ನಾನು ಊಹಿಸಿರಲಿಲ್ಲ. ನಾನು ಲಕ್ಕಿ ಎಂದು ಯಾವಾಗಲೂ ಅನಿಸುತ್ತದೆ. ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಮುಂದೆ ಅವಕಾಶ ಸಿಗಲಿ’ ಎಂದು ಮನಃಪೂರ್ವಕವಾಗಿ ಕೋರುತ್ತಾರೆ ಅವರು.
ಪರಿಕಲ್ಪನೆ ಬದಲಿಸಿದ ರಾಜ್
‘ರಾಜ್ ಬಿ. ಶೆಟ್ಟಿ ಅವರನ್ನು ಭೇಟಿ ಆದ ಬಳಿಕ ಸಿನಿಮಾ ಬಗ್ಗೆ ಇರುವ ಪರಿಕಲ್ಪನೆ ಬದಲಾಯಿತು. ಅವರು ಕೆಲಸ ಮಾಡುವ ರೀತಿಯೇ ಬೇರೆ. ಸಿನಿಮಾ ಮಾಡೋದು, ರಿಲೀಸ್ ಮಾಡೋದು, ಸಿನಿಮಾ ಗೆದ್ದಿತು ಅಥವಾ ಸೋತಿತು ಎಂದು ಹೇಳುವುದು ಮಾತ್ರ ಸಿನಿಮಾ ಜರ್ನಿ ಅಲ್ಲ. ಅವರ ಜೊತೆ ಸೇರಿದಾಗ ಮಾತ್ರ ಆ ಅನುಭವ ಸಿಗಲು ಸಾಧ್ಯ, ರಾಜ್ ತಂಡದಲ್ಲಿ ಎಲ್ಲರೂ ಸಿಂಪಲ್ ಆಗಿರುತ್ತಾರೆ, ಪ್ರೀತಿಯಿಂದ ಇರುತ್ತಾರೆ’ ಎನ್ನುತ್ತಾರೆ ಸಂಧ್ಯಾ.