ಕರ್ನಾಟಕದಲ್ಲೇ ಅತಿ ಎತ್ತರದ ಕೃಷ್ಣನ ಶಿಲ್ಪ.
ಗದಗ: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿಶಿರೂರ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀಕೃಷ್ಣ ದೇವಾಲಯ ಅವ್ಯವಸ್ಥೆಯ ಆಗರವಾಗಿದ್ದು, ಆಡಳಿತದ ನಿರ್ಲಕ್ಷ್ಯದಿಂದ ನಲುಗಿ ಹೋಗಿದೆ. ಇದೀಗ ಗ್ರಾಮಸ್ಥರು ದೇಗುಲದ ಜೀರ್ಣೋದ್ಧಾರಕ್ಕೆ ಆಗ್ರಹಿಸಿದ್ದಾರೆ. ಇಡೀ ಕರ್ನಾಟಕದಲ್ಲೇ ಅತೀ ಎತ್ತರದ ಕೃಷ್ಣನ ಮೂರ್ತಿ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾದ ದೇವಸ್ಥಾನ ಇದಾಗಿದೆ. ಸುಮಾರು ಐದು ಅಡಿ ಎತ್ತರದ ಅಪರೂಪದ ಶ್ರೀ ಕೃಷ್ಣ ಮೂರ್ತಿಯನ್ನು ಹೊಂದಿರುವ ಈ ದೇವಾಲಯವನ್ನು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸೂಕ್ಷ್ಮ ಕೆತ್ತನೆಯ ಕಿರೀಟ, ಕಿವಿಯೋಲೆ, ಹಾರ, ಉದರಬಂಧ, ವಸ್ತ್ರ ಅಲಂಕಾರಗಳು ಶಿಲ್ಪಕಲೆಯ ಅದ್ಭುತವನ್ನು ಸಾರುತ್ತವೆ. ಶಂಖ, ಚಕ್ರ, ಗದಾ, ಪದ್ಮ ಹಿಡಿದಿರುವ ಈ ಕೃಷ್ಣ ಮೂರ್ತಿ ವಿಷ್ಣುವಿನ ಅವತಾರ ರೂಪವೆಂದು ಇತಿಹಾಸಜ್ಞರು ಗುರುತಿಸಿದ್ದಾರೆ.
ಬೀಳುವ ಹಂತದಲ್ಲಿ ಅಪರೂಪದ ಕೃಷ್ಣ ಮೂರ್ತಿ
ಆದರೆ, ಇಷ್ಟೊಂದು ಅಪರೂಪದ ದೇವಾಲಯ ಇಂದು ಸಂಪೂರ್ಣ ಅವನತಿ ಹಾದಿಯಲ್ಲಿದೆ. ದೇವಾಲಯದ ಸುತ್ತಮುತ್ತ ಕಸ, ಗಿಡಗಂಟಿಗಳು ಬೆಳೆದಿದ್ದು, ಮಳೆಗಾಲದಲ್ಲಿ ದೇವಸ್ಥಾನ ಸೋರುತ್ತಿರುವುದು ಶಿಲ್ಪ ಮತ್ತು ವಾಸ್ತುಶಿಲ್ಪಕ್ಕೆ ಗಂಭೀರ ಹಾನಿಯಾಗುವ ಭೀತಿ ಹುಟ್ಟುಹಾಕಿದೆ. ಅತೀ ಸುಂದರವಾದ ಕೃಷ್ಣನ ಮೂರ್ತಿ ಬಿಳುವ ಹಂತಕ್ಕೆ ತಲುಪುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಐತಿಹಾಸಿಕ ಲಕ್ಕುಂಡಿ ಸಮೀಪದಲ್ಲೇ ಇದೆ ದೇಗುಲ
ಐತಿಹಾಸಿಕ ಲಕ್ಕುಂಡಿ ಗ್ರಾಮದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಈ ಕೃಷ್ಣ ದೇವಾಲಯವನ್ನು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಸಮಗ್ರ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪಕ್ಕದಲ್ಲೇ ಲಕ್ಕುಂಡಿಯಲ್ಲಿ ಪುರಾತನ ಕಾಲದ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವಾಗ, ನಮ್ಮ ಗ್ರಾಮದ ಐತಿಹಾಸಿಕ ದೇವಸ್ಥಾನ ನಿರ್ಲಕ್ಷ್ಯಕ್ಕೆ ಒಳಗಾಗಿರುವುದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
For More Updates Join our WhatsApp Group :




