GST ಕಲೆಕ್ಷನ್‌ನಲ್ಲಿ ದಾಖಲೆ – 5 ವರ್ಷಗಳಲ್ಲಿ ಡಬಲ್

ನವದೆಹಲಿ: ಕಳೆದ 5 ವರ್ಷಗಳಲ್ಲಿ ಸರಕು ಸೇವಾ ತೆರಿಗೆ (GST) ಸಂಗ್ರಹ ದ್ವಿಗುಣಗೊಂಡಿದೆ. 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟಾರೆ ತೆರಿಗೆ ಸಂಗ್ರಹ ದಾಖಲೆಯ 22.08 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ ಎಂಬುದನ್ನು ಇಂದು ಬಿಡುಯಾದ ಸರ್ಕಾರಿ ಡೇಟಾ ಬಹಿರಂಗಪಡಿಸಿದೆ.

ಇದು ಈವರೆಗಿನ ದಾಖಲೆಯ ತೆರಿಗೆ ಸಂಗ್ರಹವಾಗಿದೆ (GST Collections). 2021ರ ಆರ್ಥಕ ವರ್ಷದಲ್ಲಿ 11.37 ಲಕ್ಷ ಕೋಟಿ ಸಂಗ್ರಹವಾಗಿತ್ತು. ಇದೀಗ 2025ರ ಆರ್ಥಿಕ ವರ್ಷದಲ್ಲಿ ಒಟ್ಟಾರೆ ಸರಾಸರಿ ಮಾಸಿಕ ಜಿಎಸ್‌ಟಿ ಸಂಗ್ರಹ 1.84 ಲಕ್ಷ ಕೋಟಿ ಇದ್ದರೆ, 2024ರ ಆರ್ಥಿಕ ವರ್ಷದಲ್ಲಿ 1.68 ಲಕ್ಷ ಕೋಟಿ ರೂ., 2022ರ ಆರ್ಥಿಕ ವರ್ಷದಲ್ಲಿ 1.51 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದು, ಗಮನಾರ್ಹ ಏರಿಕೆಯಾಗಿರುವುದು ಕಂಡುಬಂದಿದೆ.

ಸರಕು ಸೇವಾ ತೆರಿಗೆ ವ್ಯವಸ್ಥೆ ಜಾರಿಗೆ ಬಂದು 8 ವರ್ಷ ತುಂಬಿದೆ. ಒಟ್ಟು ನೋಂದಾಯಿತ ತೆರಿಗೆ ಪಾವತಿದಾರರ ಸಂಖ್ಯೆ 65 ಲಕ್ಷ ದಿಂದ 1.51 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ 2024-25ರ ಆರ್ಥಿಕ ವರ್ಷದಲ್ಲಿ ದಾಖಲೆಯ ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಶೇ.9.4 ರಷ್ಟು ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ ಎಂಬುದನ್ನು ದತ್ತಾಂಶ ಬಹಿರಂಗಗೊಳಿಸಿದೆ.

ಇನ್ನೂ 2025ನೇ ಸಾಲಿನ ಏಪ್ರಿಲ್‌ನಲ್ಲಿ 2.37 ಲಕ್ಷ ಕೋಟಿ, ಮೇ ತಿಂಗಳಲ್ಲಿ 2.01 ಲಕ್ಷ ಕೋಟಿ ಸಂಗ್ರಹವಾಗಿದ್ದು, ಜೂನ್‌ ತಿಂಗಳ ಅಂಕಿ ಅಂಶ ಜುಲೈ 2ರಂದು ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.

ಜಿಎಸ್‌ಟಿ ಜಾರಿಗೆ ಬಂದಾಗಿನಿಂದ ತೆರಿಗೆ ಸಂಗ್ರಹ ಹೆಚ್ಚಳ ಒಂದುಕಡೆಯಾದ್ರೆ, ತೆರಿಗೆ ಮೂಲಗಳ ವಿಸ್ತರಣೆಯೂ ಆಗಿದೆ. ಇದು ಭಾರತದ ಹಣಕಾಸಿನ ಸ್ಥಿತಿಯನ್ನು ಇನ್ನಷ್ಟು ಸ್ಥಿರವಾಗಿ ಬಲಪಡಿಸಿದೆ. ಅಲ್ಲದೇ ಪರೋಕ್ಷ ತೆರಿಗೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕವಾಗಿಸಿದೆ ಎಂದು ಕೇಂದ್ರ ಸರ್ಕಾರ ತನ್ನ ಅಧಿಕೃತ ಪ್ರಕರಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *