ರಾಯಚೂರು: ಇಂಧನ ಇಲಾಖೆಗೆ ಸದ್ಯದಲ್ಲೇ 2 ಸಾವಿರ ಲೈನ್‍ಮೆನ್‍ಗಳ ನೇಮಕ ಆಗಲಿದ್ದು, ಈ ಸಂಬಂಧ 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಬುಧವಾರ ಹೇಳಿದರು.
ಬುಧವಾರ ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಸಚಿವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಲೈನ್‍ಮೆನ್‍ಗಳ ಹುದ್ದೆಗೆ ರಾಜ್ಯಾದ್ಯಂತ ಒಂದೇ ದಿನ ನೇಮಕ ಪ್ರಕ್ರಿಯೆ ನಡೆಯಲಿದ್ದು, ಪಾರದರ್ಶಕತೆಗೆ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.
ವೈಟಿಪಿಎಸ್ ಹುದ್ದೆಗಳನ್ನು ಭರ್ತಿ ಮಾಡುವಾಗ ಸ್ಥಳಿಯರಿಗೆ ಆದ್ಯತೆ ನೀಡಬೇಕು ಮತ್ತು 371 ಜೆ ಅನ್ವಯ ಮೀಸಲು ನೀಡಬೇಕು. ಆದರೆ ನುರಿತ ಕೆಲಸಗಾರರು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸ್ಥಳೀಯರ ನೇಮಕ ಆಗುತ್ತಿಲ್ಲ ಎಂಬ ಮಾತು ಕೇಳಿಬಂದಿದೆ. ಆದುದರಿಂದ ಎಷ್ಟು ಜನ ಬೇಕು ಅಂತ ನಿರ್ಧರಿಸಿ, ಅವರಿಗೆ ಕೆಪಿಸಿಎಲ್‍ನಿಂದ ಅಗತ್ಯ ತರಬೇತಿ ಕೊಡಿಸಲು ಅಗತ್ಯ ಕ್ರಮ ವಹಿಸಲಾಗುವುದು.
ನಮ್ಮ ರಾಜ್ಯದ ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಜತೆಗೆ, ಆ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ತರಬೇತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ತಿಳಿಸಿದರು.