ಗ್ರಾಹಕರ ಜೇಬಿಗೆ ಹೊರೆಯಾಯ್ತು ಕೆಂಪು ಹಣ್ಣು! ಶತಕದ ಗಡಿ ದಾಟಿದ Tomato ಬೆಲೆ

ಬೆಂಗಳೂರು: ದೇಶದೆಲ್ಲೆಡೆ ಕೆಂಪು ಹಣ್ಣಿನ ಹವಾ ಜೋರಾಗಿದೆ. ಟೊಮ್ಯಾಟೋ ಬೆಲೆ ಕೇಳಿದ್ರೆ ಸಾಕು ತಲೆ ತಿರುಗಿ ಬೀಳುವಂತಾಗಿದೆ. ಟೊಮ್ಯಾಟೋ ಬೆಳೆದವರಿಗೆ ಒಳ್ಳೆಯ ಸಮಯ ಬಂದಿದ್ದರೆ, ಅದನ್ನು ಖರೀದಿಸುವ ಗ್ರಾಹಕರು ಇದೀಗ ಕಣ್ಣೀರಿಡುವಂತಾಗಿದೆ. ಮಳೆಗಾಲದ ನಡುವೆ ಟೊಮ್ಯಾಟೋ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ.

ಕೆಲ ದಿನಗಳಿಂದ 79 ರಿಂದ 90 ರೂಪಾಯಿ ಒಳಗೆ ಏರಿಳಿತ ಕಾಣುತ್ತಿದ್ದ ಟೊಮ್ಯಾಟೋ ಬೆಲೆ ಇದೀಗ ಆನ್ಲೈನ್ ಮಾರ್ಕೆಟ್ನಲ್ಲಿ ಶತಕದ ಗಡಿ ದಾಟಿದೆ.

ಟೊಮ್ಯಾಟೋ ಹೆಚ್ಚಾಗಿ ಬೆಳೆಯುವ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆಯ ತಜ್ಞರು ಅಂದಾಜಿಸಿದ್ದಾರೆ. ಭಾರಿ ಮಳೆಯ ಜತೆಗೆ ರೋಗಗಳು ಮತ್ತು ಕಡಿಮೆ ಇಳುವರಿ ಕೂಡ ಟೊಮ್ಯಾಟೋ ಬೆಲೆ ಏರಿಕೆಗೆ ಕಾರಣವಾಗಿದೆ. ಕೆಲ ಆನ್ಲೈನ್ ಡೆಲಿವರಿ ಪ್ಲಾಟ್ಫಾರ್ಮ್ಗಳಲ್ಲಿ ಪ್ರತಿ ಕೆಜಿ ಟೊಮ್ಯಾಟೋ 100 ರಿಂದ 104 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಚಿಲ್ಲರೆ ಅಂಗಡಿಗಳಲ್ಲಿಯೂ ಸಹ ನೂರರ ಗಡಿ ಸಮೀಪ ತಲುಪಿದೆ.

ಕರ್ನಾಟಕದಲ್ಲಿ ಕೋಲಾರವು ಅತಿದೊಡ್ಡ ಟೊಮ್ಯಾಟೋ ಉತ್ಪಾದಕ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿದೆ. ಈ ಜಿಲ್ಲೆಯಲ್ಲಿ ಸುಮಾರು 15 ಸಾವಿರ ಎಕರೆಯಲ್ಲಿ ಟೊಮ್ಯಾಟೋ ಉತ್ಪಾದನೆ ಮಾಡಲಾಗುತ್ತದೆ. ಕೋಲಾರದಿಂದ ಉತ್ತರ ಭಾರತ ಮತ್ತು ಬಾಂಗ್ಲಾದೇಶದಂತಹ ನೆರೆಯ ರಾಷ್ಟ್ರಗಳಿಗೂ ರಫ್ತಾಗುತ್ತದೆ. ಶೇ. 90ರಷ್ಟು ಟೊಮ್ಯಾಟೋ ಇಲ್ಲಿಂದ ರಫ್ತಾಗುತ್ತದೆ. ಆದರೆ, ಎಲ್ಲೆಡೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳೆ ಸಂಪೂರ್ಣ ನಾಶವಾಗಿದೆ. ಇದರ ನಡುವೆ ಟೊಮ್ಯಾಟೋಗೆ ಭಾರಿ ಬೇಡಿಕೆ ಬರುತ್ತಿದೆ ಎಂದು ಕೋಲಾರ ಎಪಿಎಂಸಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇನ್ನು ಈ ವರ್ಷ ಬೆಳೆ ಕೂಡ ತುಂಬಾ ಕಡಿಮೆ ಇದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ. 25 ರಷ್ಟು ಮಾತ್ರ ಬೆಳೆ ಇದೆ. ಸಾಮಾನ್ಯವಾಗಿ ಒಂದು ಎಕರೆಗೆ 4 ಸಾವಿರ ಬಾಕ್ಸ್ ಉತ್ಪಾದನೆ ಆಗುತ್ತಿತ್ತು. ಆದರೆ, ಈ ವರ್ಷ ಕೇವಲ 1 ಸಾವಿರ ಬಾಕ್ಸ್ ಉತ್ಪಾದನೆಯಾಗಿದೆ. ಇನ್ನು ಕೆಲ ರೈತರು ಕಳೆದ ವರ್ಷದಲ್ಲಿ ಟೊಮ್ಯಾಟೋ ಬೆಳೆಯಿಂದ ಉಂಟಾದ ನಷ್ಟದ ಕಾರಣದಿಂದಾಗಿ ಈ ವರ್ಷ ಬೆಳೆ ಬೆಳೆಯದಿರುವುದು ಕೂಡ ಉತ್ಪಾದನೆ ಕುಂಠಿತಕ್ಕೆ ಕಾರಣವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಇನ್ನಷ್ಟು ಬೆಲೆ ಏರಿಕೆಯಾದರೆ ಅಚ್ಚರಿ ಪಡಬೇಕಾಗಿಲ್ಲ.

Leave a Reply

Your email address will not be published. Required fields are marked *