ಶೇಖ್ ಹಸೀನಾಗೆ ಆಶ್ರಯ: ಭಾರತದ ನಿಲುವಿಗೆ ಬಾಂಗ್ಲಾದ ವಿರೋಧ ಪಕ್ಷ ಅಸಮಾಧಾನ

ನವದೆಹಲಿ: ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಆಶ್ರಯ ನೀಡುವ ಭಾರತ ನಿಲುವಿಗೆ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿ.ಎನ್.ಪಿ) ಅಸಮಾಧಾನ ವ್ಯಕ್ತಪಡಿಸಿದೆ.

ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ನ ಪ್ರಮುಖ ವಿರೋಧ ಪಕ್ಷವಾಗಿದೆ ಬಿ.ಎನ್.ಪಿ.

‘ನಮ್ಮ ಶತ್ರುವಿಗೆ ನೀವು ಸಹಾಯ ಮಾಡಿದರೆ, ಪರಸ್ಪರ ಸಹಕಾರವನ್ನು ಗೌರವಿಸುವುದು ಕಷ್ಟವಾಗಲಿದೆ.

ಶೇಖ್ ಹಸೀನಾ ಮತ್ತೆ ಅಧಿಕಾರಕ್ಕೆ ಬರಲು ಭಾರತ ಸಹಾಯ ಮಾಡಲಿದೆ ಎಂದು ಮಾಜಿ ವಿದೇಶಾಂಗ ಸಚಿವ (ಹಸೀನಾ ಸರ್ಕಾರದ) ಹೇಳಿದ್ದರು. ಹಸೀನಾ ಅವರ ಹೊಣೆಯನ್ನು ಭಾರತವೇ ಹೊತ್ತುಕೊಳ್ಳಬೇಕು. ಉಭಯ ರಾಷ್ಟ್ರಗಳ ಜನರ ನಡುವೆ ಪರಸ್ಪರ ಯಾವುದೇ ಸಮಸ್ಯೆಗಳಿಲ್ಲ. ಭಾರತ ಒಂದು ಪಕ್ಷವನ್ನು ಬೆಂಬಲಿಸುವ ಬದಲು, ಇಡೀ ರಾಷ್ಟ್ರವನ್ನು ಬೆಂಬಲಿಸಬೇಕು’ ಎಂದು ಬಿ.ಎನ್.ಪಿ ನಾಯಕ ಗಾಯೇಶ್ವರ್ ರಾಯ್ ಹೇಳಿದ್ದಾರೆ.

‘ಬಾಂಗ್ಲಾದೇಶ ಸ್ವಾತಂತ್ರ್ಯಕ್ಕೆ ಭಾರತ ಸಹಾಯ ಮಾಡಿದೆ. ನಮ್ಮ ಪಕ್ಷ ಭಾರತ ವಿರೋಧಿ ಅಲ್ಲ. ನಾವು ಸಣ್ಣ ರಾಷ್ಟ್ರ. ವೈದ್ಯಕೀಯ ಸೇರಿ ಹಲವು ಸರಕುಗಳಿಗೆ ನಮಗೆ ಭಾರತ ಬೇಕು. ಇದರಿಂದಾಗಿ ಬಾಂಗ್ಲಾದೇಶದಿಂದ ಭಾರತ ಪಡೆಯುತ್ತಿರುವ ಲಾಭವೂ ಸಣ್ಣದಲ್ಲ’ ಎಂದು ರಾಯ್ ಹೇಳಿದ್ದಾರೆ.

ಏತನ್ಮಧ್ಯೆ, ಮುಂದಿನ ನಡೆಗಳ ಬಗ್ಗೆ ಹಸೀನಾ ಅವರೇ ನಿರ್ಧರಿಸಲಿದ್ದಾರೆ. ಈ ವಿಷಯದಲ್ಲಿ ಯಾವುದೇ ಮಾಹಿತಿ ಇಲ್ಲ’ ಎಂದು ಭಾರತದ ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ.

ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿ ಬಂದಿರುವ ಹಸೀನಾ ದೆಹಲಿ ಸಮೀಪದ ವಾಯುನೆಲೆಯಲ್ಲಿ ಆಶ್ರಯ ಪಡೆದಿದ್ದಾರೆ.

ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಮೊಹಮ್ಮದ್ ಯೂನುಸ್ ಅವರು ಗರುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

Leave a Reply

Your email address will not be published. Required fields are marked *