ನವದೆಹಲಿ: ಅಂಚೆ ಕಚೇರಿಯ ವಿಶೇಷ ಸೇವೆಗಳಲ್ಲಿ ಒಂದಾದ ರಿಜಿಸ್ಟರ್ಡ್ ಪೋಸ್ಟ್ ಇನ್ಮುಂದೆ ಇತಿಹಾಸ ಪುಟ ಸೇರಲಿದೆ. ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ನಿಲ್ಲಿಸಲು ಅಂಚೆ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಇತ್ತೀಚೆಗೆ ಸುತ್ತೋಲೆಯನ್ನೂ ಹೊರಡಿಸಿದೆ. ಅದರ ಪ್ರಕಾರ, ಸೆಪ್ಟೆಂಬರ್ 1ಕ್ಕೆ ರಿಜಿಸ್ಟರ್ಡ್ ಪೋಸ್ಟ್ಗೆ ಅಂತಿಮ ವಿದಾಯ ಹೇಳಲಾಗುತ್ತಿದೆ. ಅಂದು ಅಂಚೆ ಕಚೇರಿಯ ರಿಜಿಸ್ಟರ್ಡ್ ಪೋಸ್ಟ್ ಸೇವೆ ಮತ್ತು ಸ್ಪೀಡ್ ಪೋಸ್ಟ್ ಸೇವೆ ವಿಲೀನಗೊಳ್ಳಲಿದೆ.
ರಿಜಿಸ್ಟರ್ಡ್ ಪೋಸ್ಟ್ ಎಂದು ಹೆಸರಿಸಲಾಗಿರುವ ಅಂಚೆ ಕಚೇರಿಯ ಎಲ್ಲಾ ಕಾರ್ಯಾತ್ಮಕ ಮಾರ್ಗಸೂಚಿಗಳಲ್ಲಿ ಜುಲೈ 31ರೊಳಗೆ ತಿದ್ದುಪಡಿ ಮಾಡಬೇಕೆಂದು ಸೂಚಿಸಲಾಗಿದೆ. ರಿಜಿಸ್ಟರ್ಡ್ ಪೋಸ್ಟ್ ಬದಲು ಅದು ಸ್ಪೀಡ್ ಪೋಸ್ಟ್ ಎಂದಾಗಬಹುದು. ಇದರೊಂದಿಗೆ ಅಂಚೆ ಕಚೇರಿಯಲ್ಲಿ ರಿಜಿಸ್ಟರ್ಡ್ ಪೋಸ್ಟ್ ಎನ್ನುವ ಅಧ್ಯಾಯ ಮುಗಿಯಲಿದೆ.
ಸೆಪ್ಟೆಂಬರ್ 1ರಿಂದ ಅಂಚೆ ಕಚೇರಿಯಲ್ಲಿ ಸ್ಪೀಡ್ ಪೋಸ್ಟ್ ಮತ್ತು ಸಾಮಾನ್ಯ ಪೋಸ್ಟ್ ಸೇವೆ ಮಾತ್ರವೇ ಇರುತ್ತದೆ. ಇವು ಅಂಚೆ ವಿಲೇವಾರಿ ಸೇವೆಗಳು. ಅಂಚೆ ಕಚೇರಿಯಲ್ಲಿ ರೆಕರಿಂಗ್ ಡೆಪಾಸಿಟ್, ಸುಕನ್ಯಾ ಸಮೃದ್ಧಿ ಅಕೌಂಟ್ ಇತ್ಯಾದಿ ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳು ಯಥಾಪ್ರಕಾರ ಮುಂದುವರಿಯಲಿವೆ.
ರಿಜಿಸ್ಟರ್ಡ್ ಪೋಸ್ಟ್ ಎನ್ನುವುದು ಹಿಂದಿನ ತಲೆಮಾರಿನವರಿಗೆ ಚಿರಸ್ಮರಣೀಯ
ಕೊರಿಯರ್ಗಳ ಭರಾಟೆ ಬರುವವರೆಗೂ ರಿಜಿಸ್ಟರ್ಡ್ ಪೋಸ್ಟ್ ಎನ್ನುವುದು ಬಹಳ ವ್ಯಾಪಕವಾಗಿ ಬಳಕೆಯಲ್ಲಿತ್ತು. ಪ್ರಮುಖ ಅಂಚೆಗಳು ರಿಜಿಸ್ಟರ್ಡ್ ಪೋಸ್ಟ್ ಮೂಲಕ ಬರುತ್ತಿದ್ದುವು. ಕಂಪನಿಗಳ ಸಂದರ್ಶನ, ಅಪಾಯಿಂಟ್ಮೆಂಟ್ ಲೆಟರ್, ನೋಟೀಸ್ ಇತ್ಯಾದಿ ಮಹತ್ವದ ಪತ್ರಗಳು ಒಳಗೊಳ್ಳುತ್ತಿದ್ದುವು. ಎಲ್ಲಕ್ಕಿಂತ ಹೆಚ್ಚಾಗಿ, ರಿಜಿಸ್ಟರ್ಡ್ ಪೋಸ್ಟ್ ಮಾಡಲಾಗಿದೆ ಎಂದರೆ ಅದು ಸುರಕ್ಷಿತವಾಗಿ ತಲುಪುತ್ತದೆ ಎನ್ನುವ ಅಚಲ ನಂಬಿಕೆ ಇತ್ತು.