ಯಾದಗಿರಿ : ಜಿಲ್ಲೆಯ ಸರ್ಕಾರಿ ವಸತಿ ಶಾಲೆಯ ಶೌಚಾಲಯದೊಳಗೆ 9 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎನ್ನುವ ಪ್ರಕರಣ ಆಘಾತಕಾರಿ ವಿಚಾರವಾಗಿದೆ. ಬಾತ್‌ರೂಮ್‌ನಲ್ಲಿ ಹೆರಿಗೆ ಬಳಿಕ ವಿದ್ಯಾರ್ಥಿನಿ ಹಾಗೂ ನವಜಾತ ಶಿಶು ಇಬ್ಬರನ್ನ ಶಹಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿಂದ ನಾಲ್ವರನ್ನು ಅಮಾನತು ಮಾಡಲಾಗಿದೆ.
ನಾಲ್ವರು ವ್ಯಕ್ತಿಗಳ ವಿರುದ್ಧ ಕೇಸ್
ಶಹಾಪುರದಲ್ಲಿ ವಸತಿ ಶಾಲೆಯ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಾಗಿದೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ವರ್ಗದ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ಆಗಿದೆ.
ನಾಲ್ವರ ಅಮಾನತು
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯತನ ಆರೋಪದಡಿ ವಸತಿ ನಿಲಯದ ವಾರ್ಡನ್ ಗೀತಾ, ಸ್ಟಾಪ್ ನರ್ಸ್ ಕಾವೇರಮ್ಮ, ಮತ್ತು ಪ್ರಾಂಶುಪಾಲರಾದ ಬಸ್ಸಮ್ಮ ಪಾಟೀಲ ಸೇರಿದಂತೆ ಈ ನಾಲ್ವರನ್ನು ಸಸ್ಪೆಂಡ್ ಮಾಡುವಂತೆ ಆದೇಶ ಹೊರಡಿಸಲಾಗಿದೆ.
ಸಹೋದರನ ವಿರುದ್ದ ಎಫ್ಐಆರ್
ವಸತಿ ಶಾಲೆ ವಿದ್ಯಾರ್ಥಿನಿಯ ಸಹೋದರನ ವಿರುದ್ಧವೂ ಕೇಸ್ ದಾಖಲಾಗಿದೆ ಎನ್ನಲಾಗ್ತಿದೆ. ಸಹೋದರಿಗೆ ಹೆರಿಗೆ ಆದ ವಿಷಯವನ್ನು ಯಾರಿಗೂ ತಿಳಿಸದಂತೆ ಹಾಸ್ಟೆಲ್ ಸಿಬ್ಬಂದಿ ವರ್ಗದವರಿಗೆ ಆಕೆಯ ಸಹೋದರ ತಿಳಿಸಿದ್ದ ಎನ್ನಲಾಗ್ತಿದೆ. ಈ ಮಾಹಿತಿ ಮರೆಮಾಚಿದ ಕಾರಣ FIR ದಾಖಲಾಗಿದೆ. ಈ ಪ್ರಕರಣ ಪೋಕ್ಸೋ ಕಾಯ್ದೆಯಡಿ ಬರುತ್ತದೆ.
ವರದಿ ಸಲ್ಲಿಸಲು ಸೂಚನೆ
ಆಗಸ್ಟ್ 27ರ ಬುಧವಾರ ಮಧ್ಯಾಹ್ನ ಹೆರಿಗೆಯಾಗಿದ್ದರೂ, ಘಟನೆ ಗುರುವಾರ ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೊಸಂಬೆ, ಈ ವಿಷಯಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಮತ್ತು ದೂರು ದಾಖಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿ ಆಗಿದೆ.