ಬೆಂಗಳೂರಲ್ಲಿ ವೈದ್ಯಕೀಯ ಅದ್ಭುತ..
ಬೆಂಗಳೂರು: ಜನ್ಮತಃ ಹೈಪರ್ಇನ್ಸುಲಿನಿಸಮ್ ಎನ್ನುವ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಒಂದು ತಿಂಗಳ ಶಿಶುವಿಗೆ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ವೈಟ್ಫೀಲ್ಡ್ನ ಮಣಿಪಾಲ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ತೀವ್ರ ಹೈಪೋಗ್ಲೈಸೀಮಿಯಾ (ರಕ್ತದಲ್ಲಿ ಶರ್ಕರ ಪ್ರಮಾಣ ಕಡಿಮೆಯಾಗುವುದು) ಪರಿಣಾಮವಾಗಿ ಶಿಶುವಿಗೆ ಶಾಶ್ವತ ಮೆದುಳು ಹಾನಿಯ ಅಪಾಯ ಉಂಟಾಗಿತ್ತು. 4.6 ಕೆ.ಜಿ ತೂಕ ಹೊಂದಿದ್ದ ಈ ನವಜಾತ ಶಿಶುವಿಗೆ ಹೆಚ್ಚಿನ ಪ್ರಮಾಣದ ಇಂಟ್ರಾವೀನಸ್ ಗ್ಲೂಕೋಸ್ ನೀಡುತ್ತಿದ್ದರೂ ರಕ್ತದಲ್ಲಿ ಶರ್ಕರ ಪ್ರಮಾಣ ತೀವ್ರವಾಗಿ ಕುಸಿಯುತ್ತಿತ್ತು. ಈ ಹಿನ್ನೆಲೆ ತುರ್ತು ಚಿಕಿತ್ಸೆ ನಡೆಸಲಾಗಿದೆ.
ವೈದ್ಯರು ಮೇದೋಜೀರಕ ಗ್ರಂಥಿಯಲ್ಲಿ ಅತಿಯಾಗಿ ಇನ್ಸುಲಿನ್ ಉತ್ಪಾದನೆ ಮಾಡುತ್ತಿದ್ದ ಸಣ್ಣ ಫೋಕಲ್ ಲೀಷನ್ ಅನ್ನು ಪತ್ತೆಹಚ್ಚಿದರು. ಈ ಸಮಸ್ಯೆ ನಿರ್ದಿಷ್ಟ ಭಾಗಕ್ಕೆ ಮಾತ್ರ ಸೀಮಿತವಾಗಿದ್ದರಿಂದ, ಸಂಪೂರ್ಣ ಮೇದೋಜೀರಕ ಗ್ರಂಥಿ ತೆಗೆದುಹಾಕುವ ಅಗತ್ಯವಿಲ್ಲದೆ ನಿರ್ದಿಷ್ಟ ಜಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗಿದೆ. ಇದರಿಂದ ದೀರ್ಘಕಾಲಿಕ ಅಡ್ಡ ಪರಿಣಾಮಗಳ ಅಪಾಯವೂ ಕಡಿಮೆ ಇರಲಿದೆ ಎನ್ನಲಾಗಿದೆ.
ರೋಬೋಟಿಕ್ ಶಸ್ತ್ರಚಿಕಿತ್ಸೆ ಯಾಕೆ?
ಶಿಶುವಿನ ವಯಸ್ಸು ಹಾಗೂ ಸಮಸ್ಯೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ವೈದ್ಯರು ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಇದರ ಮೂಲಕ ಸಮಸ್ಯೆಯಿದ್ದ ಭಾಗದಲ್ಲಿ ನಿಖರವಾಗಿ ಚಿಕಿಯ್ಸೆ ನೀಡಲಾಗಿದೆ. ಯಾವುದೇ ರಕ್ತಸ್ರಾವ ಅಥವಾ ಸಂಕೀರ್ಣತೆ ಇಲ್ಲದೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬಳಿಕ ಶಿಶುವಿನ ರಕ್ತದ ಶರ್ಕರ ಮಟ್ಟ ತಕ್ಷಣವೇ ಸಾಮಾನ್ಯಗೊಂಡಿದ್ದಲ್ಲದೆ, ಗ್ಲೂಕೋಸ್ ನೀಡುವ ಅಗತ್ಯವೂ ಬಂದಿಲ್ಲ. ಇನ್ನು ಶಿಶುವನ್ನು ಒಂಬತ್ತು ದಿನಗಳ ಕಾಲ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ (NICU) ಇಟ್ಟು, ಆರೋಗ್ಯ ಸುಧಾರಣೆಯ ಬಳಿಕ ಪೋಷಕರ ಜೊತೆ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
For More Updates Join our WhatsApp Group :




