ಬಾಬರ್ ಆಝಂ ಅಬ್ಬರಕ್ಕೆ ರೋಹಿತ್ ಶರ್ಮಾ ವರ್ಲ್ಡ್ ರೆಕಾರ್ಡ್ ಧೂಳಿಪಟ!

ಬಾಬರ್ ಆಝಂ ಅಬ್ಬರಕ್ಕೆ ರೋಹಿತ್ ಶರ್ಮಾ ವರ್ಲ್ಡ್ ರೆಕಾರ್ಡ್ ಧೂಳಿಪಟ!

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೇವಲ ಮೂವರು ಬ್ಯಾಟರ್​ಗಳು ಮಾತ್ರ 4 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಈ ಮೂವರಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್​​ಮನ್ ವಿರಾಟ್ ಕೊಹ್ಲಿ. ಇದಾದ ಬಳಿಕ ರೋಹಿತ್ ಶರ್ಮಾ ಈ ದಾಖಲೆ ಬರೆದಿದ್ದರು. ಇದೀಗ ಇವರಿಬ್ಬರನ್ನು ಹಿಂದಿಕ್ಕಿ ಪಾಕಿಸ್ತಾನದ ಬಾಬರ್ ಆಝಂ ಅಗ್ರಸ್ಥಾನಕ್ಕೇರಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಹಿಟ್​ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರ ವರ್ಲ್ಡ್​ ರೆಕಾರ್ಡ್ ಅನ್ನು ಮುರಿಯುವ ಮೂಲಕ ಎಂಬುದು ವಿಶೇಷ. 

ಲಾಹೋರ್​ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ 11 ರನ್ ಬಾರಿಸಿದ್ದರು. ಈ ಹನ್ನೊಂದು ರನ್​ಗಳೊಂದಿಗೆ ಬಾಬರ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಟೀಮ್ ಇಂಡಿಯಾ ಪರ 151 ಟಿ20 ಇನಿಂಗ್ಸ್ ಆಡಿರುವ ಹಿಟ್​ಮ್ಯಾನ್ ಒಟ್ಟು 4231 ರನ್​ ಗಳಿಸಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದರು. ಇದೀಗ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕುವಲ್ಲಿ ಬಾಬರ್ ಆಝಂ ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನ್ ಪರ ಈವರೆಗೆ 121 ಟಿ20 ಇನಿಂಗ್ಸ್ ಆಡಿರುವ ಬಾಬರ್ ಆಝಂ 3 ಭರ್ಜರಿ ಶತಕ ಹಾಗೂ 36 ಅರ್ಧಶತಕಗಳೊಂದಿಗೆ ಒಟ್ಟು 4234 ರನ್​ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇತ್ತ ರೋಹಿತ್ ಶರ್ಮಾ (4231) ಹಾಗೂ ವಿರಾಟ್ ಕೊಹ್ಲಿ (4188) ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ನೀಡಿರುವ ಕಾರಣ ಸದ್ಯಕ್ಕಂತು ಬಾಬರ್ ಆಝಂ ಅವರ ಈ ವಿಶ್ವ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಹೀಗಾಗಿ ಒಂದಷ್ಟು ಕಾಲ ಈ ವರ್ಲ್ಡ್ ರೆಕಾರ್ಡ್ ಬಾಬರ್ ಹೆಸರಿನಲ್ಲಿಯೇ ಉಳಿಯಲಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *