ಗ್ಯಾಂಗ್ವಾರ್ಗೆ ಹೋಯ್ತಾ ಜೀವ?ಘಟನೆಯ ಸಾರಾಂಶ.
ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ನಲ್ಲಿ ಶುಕ್ರವಾರ ನಸುಕಿನ ಜಾವ ರೌಡಿಶೀಟರ್ನೊಬ್ಬರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಮೃತರನ್ನು ತಲಪಾಡಿ ಸಮೀಪದ ಮುಳ್ಳುಗುಡ್ಡೆ ನಿವಾಸಿ ಆರಿಫ್ ಅಲಿಯಾಸ್ ಟಾಬ್ಲೆಟ್ ಆರಿಫ್ (46) ಎಂದು ಗುರುತಿಸಲಾಗಿದೆ. ಕೊಲೆಗೆ ನೈಜ ಕಾರಣವೇನೆಂಬುದು ತಿಳಿಯಬೇಕಿದೆ.
ಆರಿಫ್ ಬೈಕ್ಗೆ ಕಾರಿನಿಂದ ಡಿಕ್ಕಿ
ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ರೌಡಿಶೀಟರ್ ಆಗಿದ್ದ ಆರಿಫ್, ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಬೈಕ್ನಲ್ಲಿ ಸಂಚರಿಸುತ್ತಿದ್ದ ವೇಳೆ ದುಷ್ಕರ್ಮಿಗಳ ಹಲ್ಲೆಗೊಳಗಾಗಿದ್ದಾನೆ. ಆರಿಫ್ ತೆರಳುತ್ತಿದ್ದ ಬೈಕ್ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ರಸ್ತೆ ಮೇಲೆ ಬಿದ್ದಾಗ, ಕಾಯುತ್ತಾ ಕುಳಿತಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತಲೆಯ ಭಾಗಕ್ಕೆ ಕಡಿದು ಕೊಲೆಗೈದಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
ಈ ಮೊದಲೂ ನಡೆದಿತ್ತು ಕೊಲೆ ಯತ್ನ
ಆರಿಫ್ ವಿರುದ್ಧ ಹಿಂದೆಯೂ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ. 2022ರಲ್ಲಿ ಉಚ್ಚಿಲ ಸೇತುವೆ ಸಮೀಪ ಆತನ ಮೇಲೆ ಕೊಲೆ ಯತ್ನ ನಡೆದಿತ್ತು. ಹೀಗಾಗಿ ಈ ಹತ್ಯೆಗೆ ಗ್ಯಾಂಗ್ವಾರ್ ಹಿನ್ನೆಲೆ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ತನಿಖೆಯ ಬಳಿಕವೇ ತಿಳಿಯಬೇಕಿದೆ.
For More Updates Join our WhatsApp Group :



