ವಾಷಿಂಗ್ಟನ್: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಭಾರತೀಯ ಮೂಲದ ಯುವಕನೊಬ್ಬನನ್ನು ಸ್ಥಳೀಯ ವ್ಯಕ್ತಿ ಗುಂಡಿಕ್ಕಿ ಕೊಂದ ಘಟನೆ ಬೆಳಕಿಗೆ ಬಂದಿದೆ. ಹರಿಯಾಣದ ಜಿಂದ್ ಜಿಲ್ಲೆಯ 26 ವರ್ಷದ ಕಪಿಲ್ ಮೃತ ವ್ಯಕ್ತಿ. ಕಪಿಲ್ ಅಮೆರಿಕದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ಸಂಜೆ ಈ ಘಟನೆ ನಡೆದಿದೆ. ಪ್ರಾಥಮಿಕ ವರದಿ ಪ್ರಕಾರ, ಅಂಗಡಿಯ ಬಳಿಯ ರಸ್ತೆಯಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಅಮೆರಿಕದ ಪ್ರಜೆಯೊಬ್ಬರನ್ನು ತಡೆದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ.
ವಾದ ವಿವಾದ ತೀವ್ರಗೊಂಡಾಗ ಆ ವ್ಯಕ್ತಿ ತಾನು ತೆಗೆದುಕೊಂಡಿದ್ದ ಪಿಸ್ತೂಲಿನಿಂದ ಕಪಿಲ್ ಮೇಲೆ ಗುಂಡು ಹಾರಿಸಿದ ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಅವರನ್ನು ಮೃತರೆಂದು ಘೋಷಿಸಿದ್ದಾರೆ.
ಮೃತ ಕಪಿಲ್ ಅವರ ಚಿಕ್ಕಪ್ಪ ರಮೇಶ್ ಕುಮಾರ್ ಹೇಳುವ ಪ್ರಕಾರ, “ಕಪಿಲ್ ಸಾವಿನ ಬಗ್ಗೆ ನಮಗೆ ಅಮೆರಿಕದ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಭಾರತಕ್ಕೆ ತರಲು ಸುಮಾರು 15 ಲಕ್ಷ ರೂ. ವೆಚ್ಚ ವಾಗಲಿದೆಎಂದು ತಿಳಿಸಿದ್ದಾರೆ.
ಅಮೆರಿಕದ ಅಧಿಕಾರಿಗಳು ಶಂಕಿತನ ಹೆಸರು ಅಥವಾ ಬಂಧನದ ಮಾಹಿತಿ ಇನ್ನೂ ಬಹಿರಂಗಪಡಿಸಿಲ್ಲ. ಕಪಿಲ್ ಅವರ ಮರಣೋತ್ತರ ಪರೀಕ್ಷೆ ಬುಧವಾರ ನಡೆಯಲಿದೆ.
For More Updates Join our WhatsApp Group :