ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ತಲೆಮೇಳ.
ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನ ಸಭಾ ವಿಶೇಷಅಧಿವೇಶನದ ಹೊತ್ತಲ್ಲಿಯೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ SC, ST ಸಚಿವರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಸಭೆ ನಡೆದಿದೆ. ಈ ಹಿಂದೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೀಡಿದ್ದ ಸೂಚನೆ ಈ ಮೀಟಿಂಗ್ ನಡೆದಿದೆ ಎನ್ನಲಾಗಿದ್ದು, ಅಧಿಕಾರ ಹಂಚಿಕೆ ವಿಚಾರ ಚರ್ಚೆ ಮಧ್ಯೆಯೇ ಈ ಸಭೆ ಮಹತ್ವ ಪಡೆದುಕೊಂಡಿದೆ.
ಸಚಿವರಾದ ಪರಮೇಶ್ವರ್, ಮುನಿಯಪ್ಪ, ಮಹದೇವಪ್ಪ, ಶಿವರಾಜ ತಂಗಡಗಿ, ಮಾಜಿ ಸಚಿವ ಕೆ.ಎನ್.ರಾಜಣ್ಣ ಸೇರಿ 20ಕ್ಕೂ ಹೆಚ್ಚು ಎಸ್ಸಿ, ಎಸ್ಟಿ ಶಾಸಕರು ಹಾಗೂ ಪರಿಷತ್ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದಾರೆ. SCSP-TSP ಅನುದಾನ ಬಳಕೆ ಕುರಿತು ಸಭೆ ಹೆಸರಲ್ಲಿ ಕಾಂಗ್ರೆಸ್ನ SC, ST ಸಚಿವರು, ಶಾಸಕರು ಒಗ್ಗಟ್ಟಿನ ಶಕ್ತಿ ಪ್ರದರ್ಶನ ಮಾಡಿದ್ದು, SCSP-TSP ಅನುದಾನ ಬೇರೆ ಯೋಜನೆಗಳಿಗೆ ಬಳಸ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಜೆಟ್ನಲ್ಲಿ SC, ST ಸಮುದಾಯಕ್ಕೆ ವಿಶೇಷ ಕೊಡುಗೆ ನೀಡಬೇಕು. SCSP-TSP ಹಣ ಯಾವುದಕ್ಕೆ ಮೀಸಲಿದೆಯೋ ಅದಕ್ಕೇ ಬಳಸಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಭೇಟಿಯಾಗುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದ್ದು, ದಲಿತ ಸಿಎಂ ಬೇಡಿಕೆ ಕುರಿತಾಗಿ ಸಮುದಾಯದಿಂದ ಹೈಕಮಾಂಡ್ ಮುಂದೆ ಹಕ್ಕು ಮಂಡನೆ ಬಗ್ಗೆಯೂ ಸಮಾಲೋಚನೆ ಈ ವೇಳೆ ನಡೆದಿದೆ ಎನ್ನಲಾಗಿದೆ.
SCSP, TSP ಹಣ ನೀಡದ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಈ ಹಿಂದೆ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ರೋಷಾವೇಶ ಪ್ರದರ್ಶಿಸಿದ್ದರು. ಎಸ್ಸಿಎಸ್ಪಿ, ಟಿಎಸ್ಪಿಗೆ ಅನುದಾನ ಹಂಚಿಕೆ ಮಾಡದಿರುವುದು ಯಾಕೆ? ಏನು ಅಂದುಕೊಂಡಿದ್ದೀರಿ? SCSP, TSP ಹಣ ಬೇರೆ ಕಡೆ ಬಳಸುತ್ತಿದ್ದೀರಾ? ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಏರುಧ್ವನಿಯಲ್ಲಿಯೇ ಸಚಿವರು ಪ್ರಶ್ನಿಸಿದ್ದು, ಮಹದೇವಪ್ಪ ಅವರ ಆಕ್ರೋಶ ಕಂಡು ಸಂಪುಟ ಸಹೋದ್ಯೋಗಿಗಳು ಕಕ್ಕಾಬಿಕ್ಕಿ ಆದ ಪ್ರಸಂಗ ನಡೆದಿತ್ತು. ಆ ಬೆನ್ನಲ್ಲಿಯೇ ಈಗ ಸಮುದಾಯದ ನಾಯಕರ ಸಭೆ ನಡೆದಿರೋದು ಭಾರೀ ಕುತೂಹಲ ಮೂಡಿಸಿದೆ.
For More Updates Join our WhatsApp Group :




