ಕೇರಳ : ಮಗಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿ ತ್ವರಿತ ವಿಶೇಷ ನ್ಯಾಯಾಲಯವು 104 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಅಲ್ಲದೇ, ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಒಂದು ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.
ಅರಿಕ್ಕೋಡಿನ 41 ವರ್ಷದ ಅಪರಾಧಿಯು ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ. ಮನೆಯಲ್ಲಿಯೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. 2006ರಲ್ಲಿ ಜನಿಸಿದ್ದ ಮಗಳ ಮೇಲೆ ಆಕೆಯ 10ನೇ ವಯಸ್ಸಿನಿಂದಲೂ 2023ರ ಮಾರ್ಚ್ 22ರ ವರೆಗೂ ಲೈಂಗಿಕವಾಗಿ ಶೋಷಿಸುತ್ತಿದ್ದ. ಅಲ್ಲದೇ, ಈ ಕೃತ್ಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ. ಆದರೆ, ಬಾಲಕಿ ದೈಹಿಕವಾಗಿ ದುರ್ಬಲಳಾಗಿ ಅಸ್ವಸ್ಥಗೊಂಡಾಗ ಆರೋಪಿ ತಂದೆಯೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದ. ಆಗ ಬಾಲಕಿ ಗರ್ಭಿಣಿ ಎಂದು ತಿಳಿದ ಆಸ್ಪತ್ರೆಯ ಅಧಿಕಾರಿಗಳು ಆಕೆಯನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಸಲಹೆಯಂತೆ ಗರ್ಭಪಾತ ಮಾಡಲಾಗಿತ್ತು.
ಇದಾದ ಬಳಿಕ ನೊಂದ ಬಾಲಕಿಯ ದೂರಿನ ಮೇರೆಗೆ ಅರಿಕ್ಕೋಡ್ ಪೊಲೀಸರು ಕಾಮುಕ ತಂದೆಯ ವಿರುದ್ಧ ಪ್ರಕರಣ ದಾಖಲಿಸಿ, 2023ರ ಏಪ್ರಿಲ್ 8ರಂದು ಬಂಧಿಸಿದ್ದರು. ಸಂಪೂರ್ಣ ತನಿಖೆಗೊಂಡು ಚಾರ್ಜ್ ಶೀಟ್ ಸಲ್ಲಿಸಿದ್ದರು. ಆರೋಪಿಯು ದೂರುದಾರೆಯ ಮೇಲೆ ಪ್ರಭಾವ ಬೀರುವುದರಿಂದ ಪ್ರಕರಣ ಮುಗಿಯುವವರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದರ ಆಧಾರದ ಮೇಲೆ ನ್ಯಾಯಾಲಯವು ಆರೋಪಿಗೆ ಜಾಮೀನು ನೀಡುವುದನ್ನೂ ಪರಿಗಣಿಸಿಲ್ಲ.
ಪೋಕ್ಸೋ ಕಾಯ್ದೆಯ ಸೆಕ್ಷನ್ 5 (ಜೆ) ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ಸೆಕ್ಷನ್ 5 (ಎಂ) ಅಡಿಯಲ್ಲಿ 25 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿ ಕೋರ್ಟ್ ಆದೇಶಿಸಿದೆ. ಜೊತೆಗೆ ಎರಡೂ ಸೆಕ್ಷನ್‌ಗಳಡಿ ತಲಾ 25,000 ರೂಪಾಯಿ ದಂಡ ಹಾಕಲಾಗಿದೆ. ಈ ದಂಡ ಪಾವತಿಗೆ ತಪ್ಪಿದಲ್ಲಿ ಐದು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಸೆಕ್ಷನ್ 5(ಎನ್) ಅಡಿಯಲ್ಲೂ 25 ವರ್ಷಗಳ ಕಠಿಣ ಜೈಲು ಶಿಕ್ಷೆ, 20,000 ರೂಪಾಯಿ ದಂಡ ವಿಧಿಸಲಾಗಿದೆ. ಈ ದಂಡ ಪಾವತಿಸದಿದ್ದಲ್ಲಿ ನಾಲ್ಕು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಇರುತ್ತದೆ. ಸೆಕ್ಷನ್ 9 (ಎಂ) ಮತ್ತು 9 (ಎನ್) ತಲಾ ಆರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ 5,000 ರೂ. ದಂಡ ಹಾಕಲಾಗಿದೆ. ದಂಡ ಪಾವತಿಸದಿದ್ದಲ್ಲಿ ಎರಡೂ ಸೆಕ್ಷನ್‌ಗಳಲ್ಲಿ ತಲಾ ಒಂದು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಪೋಕ್ಸೋ ಕಾಯ್ದೆಯ ಸೆಕ್ಷನ್ 5 (ಎಲ್) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (3) ಅಡಿಯಲ್ಲಿ ಅತ್ಯಾಚಾರಕ್ಕಾಗಿ ತಲಾ 20 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡ, ಇದೆಲ್ಲದರ ಹೊರತಾಗಿ ಐಪಿಸಿ ಸೆಕ್ಷನ್ 506ರ ಅಡಿಯಲ್ಲಿ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಬಾಲಾಪರಾಧಿ ಕಾಯ್ದೆ ಅಡಿಯಲ್ಲಿ ಮೂರು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.