ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರ ಮಹಿಳಾ 50 ಕೆಜಿ ಕುಸ್ತಿ ಈವೆಂಟ್‌ನ ಫೈನಲ್ ಪಂದ್ಯಕ್ಕೂ ಮುನ್ನ ಭಾರತ ಕುಸ್ತಿಪಟು ವಿನೇಶ್ ಫೋಗಟ್ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಅಧಿಕ ತೂಕದ ಕಾರಣ ವಿನೇಶ್ ಅವರನ್ನು ಫೈನಲ್ ಪಂದ್ಯಕ್ಕೂ ಮೊದಲೇ ಅನರ್ಹಗೊಳಿಸಲಾಗಿದೆ.
ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಫೋಗಟ್ ಕ್ಯೂಬಾದ ಲೋಪೆಜ್ ಗುಜ್ಮನ್ ಅವರನ್ನು 5-0 ಅಂತರದಿಂದ ಮಣಿಸಿದ್ದರು. ಇದರೊಂದಿಗೆ ಒಲಿಂಪಿಕ್ಸ್ ಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು
ಅನರ್ಹಗೊಳಿಸಿರುವ ಬಗ್ಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ದೃಢಪಡಿಸಿದೆ. ಅಧಿಕ ತೂಕದ ಕಾರಣ ಫೋಗಟ್ ಅವರನ್ನು ಒಲಿಂಪಿಕ್ಸ್ ಮಹಿಳಾ ವಿಭಾಗದ 50 ಕೆಜಿ ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಐಒಎ, “ವಿನೇಶ್ ಫೋಗಟ್ ಮಹಿಳಾ ಕುಸ್ತಿಯ 50 ಕೆಜಿ ವಿಭಾಗದಿಂದ ಅನರ್ಹಗೊಂಡಿರುವುದಕ್ಕೆ ಭಾರತೀಯ ತಂಡಕ್ಕೆ ದುಃಖವಾಗಿದೆ. ಭಾರತೀಯ ತಂಡವು ರಾತ್ರಿಯಿಡೀ ಎಷ್ಟೇ ಪ್ರಯತ್ನಿಸಿದರೂ, ಇಂದು ಬೆಳಗ್ಗೆ ಅವರ ತೂಕವು 50 ಕೆಜಿಗಿಂತ ಹೆಚ್ಚಾಗಿದೆ ಎಂದು ತಿಳಿಸಿದೆ.
ಇದಕ್ಕೂ ಮೊದಲ ಪಂದ್ಯದಲ್ಲಿ ಜಪಾನಿನ ಸೋಲಿಲ್ಲದ ಸರದಾರೆ ಎನಿಸಿಕೊಂಡಿದ್ದ 3 ಬಾರಿಯ ವಿಶ್ವ ಚಾಂಪಿಯನ್ ಹಾಗೂ ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಯುಯಿ ಸುಸಾಕಿ ವಿರುದ್ಧ 3-2 ಅಂತರದಿಂದ ಗೆಲುವು ಸಾಧಿಸಿದ್ದರು. ಈ ಮೂಲಕ ಅವರು ಬಂಗಾರದ ಕನಸನ್ನು ಭಾರತೀಯರಲ್ಲಿ ಬಿತ್ತಿದ್ದರು.
ಆದರೆ ಎರಡು ಕೆಜಿ ತೂಕ ಹೆಚ್ಚಾಗಿದ್ದರಿಂದ ಇದೀಗ ಅವರು ಪ್ಯಾರಿಸ್ ಒಲಿಂಪಿಕ್ಸ್ನಿಂದಲೇ ಅನರ್ಹಗೊಂಡಿದ್ದಾರೆ. ರಾತ್ರಿ ಇದ್ದಕ್ಕಿದ್ದಂತೆ 2 ಕೆಜಿ ತೂಕ ಹೆಚ್ಚಾಗಿರುವುದು ಅಚ್ಚರಿಗೂ ಕಾರಣವಾಗಿದೆ.