ಗ್ರಾಹಕರಿಗೆ ಶಾಕ್ || ಪ್ಲಾಟ್​ಫಾರ್ಮ್ ಶುಲ್ಕ ಹೆಚ್ಚಿಸಿದ Swiggy, Zomato

ನವದೆಹಲಿ: ಆಹಾರ ವಿತರಣಾ ಪ್ಲಾಟ್​​ಫಾರ್ಮ್​ಗಳಾದ ಜೊಮಾಟೊ ಮತ್ತು ಸ್ವಿಗ್ಗಿ ಮತ್ತೊಮ್ಮೆ ತಮ್ಮ ಪ್ಲಾಟ್​ಫಾರ್ಮ್ ಶುಲ್ಕವನ್ನು ಹೆಚ್ಚಿಸಿವೆ. ಈ ಹಿಂದೆ ಪ್ರತಿ ಆರ್ಡರ್​ಗೆ 5 ರೂ. ಇದ್ದ ಪ್ಲಾಟ್​ಫಾರ್ಮ್​ ಫೀಯನ್ನು ಈಗ 6 ರೂ.ಗೆ ಹೆಚ್ಚಿಸಲಾಗಿದೆ. ಪ್ರಸ್ತುತ ದೆಹಲಿ ಮತ್ತು ಬೆಂಗಳೂರಿನಲ್ಲಿ ವಿತರಣಾ ಶುಲ್ಕ, ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ), ರೆಸ್ಟೋರೆಂಟ್ ಶುಲ್ಕಗಳು ಮತ್ತು ನಿರ್ವಹಣಾ ಶುಲ್ಕಗಳನ್ನು ಹೊರತು ಪಡಿಸಿ ಪ್ಲಾಟ್​ಫಾರ್ಮ್​ ಫೀಯನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತಿದೆ.

ಎರಡೂ ಪ್ಲಾಟ್ ಫಾರ್ಮ್​​ಗಳಲ್ಲಿನ ಲಾಯಲ್ಟಿ ಯೋಜನೆಗೆ ಸೇರಿದ ಗ್ರಾಹಕರನ್ನು ಸೇರಿಸಿ ಎಲ್ಲ ಗ್ರಾಹಕರಿಗೆ ಹಾಗೂ ಎಲ್ಲಾ ರೀತಿಯ ಆರ್ಡರ್​ಗಳಿಗೆ ಪ್ಲಾಟ್​ಫಾರ್ಮ್​ ಫೀ ಅನ್ವಯವಾಗುತ್ತದೆ. ಇದು ಕಂಪನಿಗಳ ಆದಾಯಕ್ಕೆ ಮತ್ತು ವೆಚ್ಚ ನಿರ್ವಹಣೆಗೆ ನೇರವಾಗಿ ಕೊಡುಗೆ ನೀಡುತ್ತದೆ.

ಪ್ರತಿ ಆರ್ಡರ್​ಗೆ 1 ರೂಪಾಯಿ ಹೆಚ್ಚಳವು ಗ್ರಾಹಕರಿಗೆ ಸಣ್ಣದಾಗಿ ತೋರಿದರೂ, ಸುಮಾರು 2.2 ರಿಂದ 2.5 ಮಿಲಿಯನ್ ದೈನಂದಿನ ಆರ್ಡರ್​ಗಳನ್ನು ನಿರ್ವಹಿಸುವ ಜೊಮಾಟೊಗೆ, ಇದು ಹೆಚ್ಚುವರಿಯಾಗಿ ದೈನಂದಿನ 25 ಲಕ್ಷ ರೂ. ಆದಾಯ ತಂದು ಕೊಡಲಿದೆ. ಆಹಾರ ವಿತರಣಾ ಕಂಪನಿಗಳು ಈ ಪ್ಲಾಟ್​ಫಾರ್ಮ್ ಶುಲ್ಕ ಏರಿಕೆಯ ಮೂಲಕ ಪ್ರತಿದಿನ 1.25 ರಿಂದ 1.5 ಕೋಟಿ ರೂಪಾಯಿ ಲಾಭ ಗಳಿಸುವ ನಿರೀಕ್ಷೆ ಇಟ್ಟುಕೊಂಡಿವೆ.

ಸ್ವಿಗ್ಗಿ ಮೊದಲ ಬಾರಿಗೆ ಏಪ್ರಿಲ್ 2023 ರಲ್ಲಿ 2 ರೂ.ಗಳ ಪ್ಲಾಟ್​ಫಾರ್ಮ್ ಶುಲ್ಕವನ್ನು ಪರಿಚಯಿಸಿತ್ತು. ಅದೇ ವರ್ಷದ ಆಗಸ್ಟ್​ನಲ್ಲಿ ಜೊಮಾಟೊ ಕೂಡ ಶುಲ್ಕ ವಿಧಿಸಲಾರಂಭಿಸಿತು. ಅಂದಿನಿಂದ, ಎರಡೂ ಕಂಪನಿಗಳು ಈ ಶುಲ್ಕವನ್ನು ಹೆಚ್ಚಿಸುತ್ತಲೇ ಬಂದಿವೆ. ಶುಲ್ಕ ಹೆಚ್ಚಿಸಿದರೂ ಗ್ರಾಹಕರು ಆರ್ಡರ್​ ಮಾಡುವುದನ್ನು ಕಡಿಮೆ ಮಾಡಿಲ್ಲ ಎಂಬುದನ್ನು ಎರಡೂ ಕಂಪನಿಗಳು ಕಂಡುಕೊಂಡಿವೆ.

Leave a Reply

Your email address will not be published. Required fields are marked *