ಬೆಂಗಳೂರು: ಸಿದ್ದರಾಮಯ್ಯನವರೇ, ನಿಮ್ಮ ನೇತೃತ್ವದಲ್ಲಿ ಇಷ್ಟೊಂದು ಲೂಟಿ ಆಗ್ತಿದೆ. ಇಂದು ಜನ ಪ್ರಶ್ನಿಸುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಇಂದು ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಚರ್ಚೆ ಮಾಡಲು ನಾವು ನಿಲುವಳಿ ಸೂಚನೆ ಮಂಡನೆ ಮಾಡಿದ್ದೆವು. ನಾವೇನು ನಿಮಗೆ ಬಹುಮತ ಇಲ್ಲ ಅಂತ ಕೇಳಿರಲಿಲ್ಲ. ಬಹುಮತ ತೆಗೆದುಕೊಂಡು ಏನು ಮಾಡ್ತೀರಿ? ಕಾನೂನಾತ್ಮಕವಾಗಿ ನಾವು ಮೊದಲ ಪ್ರಶ್ನೆ ಕೇಳಿದ್ವಿ. ಸದನದಲ್ಲಿ 224 ಶಾಸಕರು, ಅಧಿಕಾರಗಳು, ಮಾಧ್ಯಮದವರಿದ್ದರು. ಅದು ಬಿಟ್ಟು ಹೇಳಿಕೆ ಕೊಡದೇ ಓಡಿಹೋದ್ರಿ. ಸರ್ಕಾರದ ಅಧಿಕಾರ ಬಳಸಿಕೊಂಡು, ನಮಗಿಂತ ಮೊದಲು ಹೋಗಿ ಭಾಷಣ ಮಾಡಿದ್ರಲ್ಲ, ಯಾವ ನ್ಯಾಯ ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ ಒಬ್ಬರು ಉಪ ಮುಖ್ಯಮಂತ್ರಿ. ನೀವೇ ಹೋರಾಟ ಮಾಡಿ, ಕಲ್ಲು ಹೊಡೀರಿ ಅಂತ ಹೇಳ್ತೀರಿ. ನಾವು ವಿಧಾನಸೌಧದಲ್ಲಿ ಹೋರಾಟ ಮಾಡುತ್ತಿದ್ದೆವು. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದ್ರೆ, ಅದಕ್ಕೆ ನೀವೇ ನೇರ ಹೊಣೆ. ರಾಷ್ಟ್ರಪತಿ ಆಡಳಿತ ಈಗಲೇ ಬರಲಿ, ಪೊಲೀಸರ ಕೈ ಕಟ್ಟಿದ್ದೀರಾ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ-ಜೆಡಿಎಸ್ ಮಾತ್ರವಲ್ಲ, ರಾಜ್ಯದ ಎಲ್ಲಾ ಜನ ಕೂಗ್ತಿದ್ದಾರೆ. ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿರೋದು ಯಾರು?, ಟಿ.ಜೆ ಅಬ್ರಹಾಂ, ಒಬ್ಬ ಅಲ್ಪಸಂಖ್ಯಾತ. ಸ್ನೇಹಮಯಿ ಕೃಷ್ಣಾ, ಪ್ರದೀಪ್ ಅವರು ಇದ್ದಾರೆ. ಕಾಗೆ ಬೆಳ್ಳಗಿದೆಯಾ, ಕಪ್ಪಿಗೆ ಇದೆಯಾ? ತೀರ್ಮಾನ ಮಾಡಿ. ಅದನ್ನು ತೀರ್ಮಾನ ಮಾಡೋದು ಬಿಜೆಪಿ ಅಲ್ಲ, ನ್ಯಾಯಾಲಯ ಎಂದರು.
ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್ ಕೊಟ್ಟಾಗ ಹಬ್ಬ ಮಾಡಿದ್ರಿ, ಈಗ ಗಲಾಟೆ ಮಾಡ್ತೀರಿ. ಒಂದೇ ಸರ್ಕಾರ, ಒಂದೇ ಮಂತ್ರಿ ಮಂಡಲ, ಒಂದೇ ಕ್ಯಾಬಿನೆಟ್. ಎರಡು ನೀತಿ, ದ್ವಂದ್ವ ಯಾಕೆ?, ನಾಗೇಂದ್ರಗೆ ಒಂದು ಕಾನೂನು, ಸಿದ್ದರಾಮಯ್ಯಗೆ ಒಂದು ಕಾನೂನು. ಜನ ಇದರ ಬಗ್ಗೆ ಪ್ರಶ್ನೆ ಮಾಡ್ತಿದ್ದಾರೆ ಎಂದು ಹೇಳಿದರು.