ಹಾಸನ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖಂಡಿತ ನ್ಯಾಯ ಸಿಗುತ್ತದೆ ಏಕೆಂದರೆ, ನಿವೇಶನ ಹಂಚಿಕೆ ವೇಳೆ ಸಿದ್ದರಾಮಯ್ಯ ಮುಡಾ ಮೇಲೆ ಪ್ರಭಾವ ಬೀರುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಬುಧವಾರ ಎತ್ತಿನಹೊಳೆ ಯೋಜನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಪಾಲ್ಗೊಂಡಿದ್ದ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ.ಹೀಗಾಗಿ ಸಿದ್ದರಾಮಯ್ಯ ಅವರು ಅದರಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ. ಶಾಸಕ ಆರ್.ವಿ.ದೇಶಪಾಂಡೆ ಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, ಸದ್ಯ ಸಿಎಂಹುದ್ದೆ ಖಾಲಿ ಇಲ್ಲ ಎಂದಿದ್ದಾರೆ,. “ಹಲವು ನಾಯಕರು ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿರುತ್ತಾರೆ, ಆದರೆ ಇದು ಹುದ್ದೆಯ ಬಗ್ಗೆ ಜಗಳವಾಡುವ ಸಮಯವಲ್ಲ. ಮುಡಾ ಹಗರಣವನ್ನು ಡೋಲು ಬಾರಿಸುವ ಮೂಲಕ ವಿರೋಧ ಪಕ್ಷಗಳು ಸಿದ್ದರಾಮಯ್ಯನವರ ವರ್ಚಸ್ಸಿಗೆ ಕಳಂಕ ತರಲು ಪ್ರಯತ್ನಿಸುತ್ತಿವೆ.
ಚನ್ನಪಟ್ಟಣ ಉಪಚುನಾವಣೆಯನ್ನು ಕಾಂಗ್ರೆಸ್ ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸುತ್ತಿದ್ದು, ಎಲ್ಲಾ ನಾಯಕರು ಒಗ್ಗಟ್ಟಿನಿಂದ ಕ್ಷೇತ್ರವನ್ನು ಗೆಲ್ಲಲು ಶ್ರಮಿಸುತ್ತಿದ್ದಾರೆ ಎಂದು ರಾಜಣ್ಣ ಹೇಳಿದರು. ಪಕ್ಷದ ಹೈಕಮಾಂಡ್ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಿದ ನಂತರ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ ಎಂದು ಅವರು ಹೇಳಿದರು. ಎಲ್ಲ ಅಡೆತಡೆಗಳನ್ನು ನಿವಾರಿಸಿ ಎತ್ತಿನಹೊಳೆ ಯೋಜನೆಯ ಮೊದಲ ಹಂತವನ್ನು ಅನುಷ್ಠಾನಕ್ಕೆ ತರಲು ಶ್ರಮಿಸಿದ ಶಿವಕುಮಾರ್ ಅವರನ್ನು ಬಹುಶಃ ಮೊದಲ ಬಾರಿಗೆ ರಾಜಣ್ಣ ಶ್ಲಾಘಿಸಿದರು. ಶಿವಕುಮಾರ್ ಅವರಿಗೆ ಯೋಜನೆಯ ಲಾಭ ಪಡೆಯುವ ಏಳು ಜಿಲ್ಲೆಗಳ ಜನರ ಪರವಾಗಿ ಧನ್ಯವಾದ ಅರ್ಪಿಸಿದರು.