ಲಂಡನ್: ಭಾರತ ಮತ್ತು ಬ್ರಿಟನ್ ದೇಶಗಳ ಮಧ್ಯೆ ಇಂದು ಐತಿಹಾಸಿಕವೆನಿಸುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದಿದೆ. ಈ ಒಪ್ಪಂದದಿಂದ ಎರಡೂ ದೇಶಗಳ ನಡುವಿನ ವ್ಯಾಪಾರ ವಹಿವಾಟು ವಾರ್ಷಿಕವಾಗಿ 34 ಬಿಲಿಯನ್ ಡಾಲರ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಒಪ್ಪಂದವು ಎರಡೂ ದೇಶಗಳಿಗೂ ಮಹತ್ವದ್ದಾಗಿದೆ. ನರೇಂದ್ರ ಮೋದಿ ಅವರ ಬ್ರಿಟನ್ ಪ್ರವಾಸದ ವೇಳೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ. ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಅಧಿಕೃತ ಮುದ್ರೆ ಸಿಕ್ಕಿದೆ.

ಮುಂಬರುವ ದಿನಗಳಲ್ಲಿ ಯೂರೋಪಿಯನ್ ಯೂನಿಯನ್ ಮತ್ತು ಅಮೆರಿಕದೊಂದಿಗೆ ಭಾರತ ಟ್ರೇಡ್ ಡೀಲ್ಗಳಿಗೆ ಸಹಿ ಹಾಕಲಿದೆ. ಭಾರತ ಇದೂವರೆಗೂ ಭಾಗಿಯಾಗಿರುವ ವ್ಯಾಪಾರ ಒಪ್ಪಂದಗಳಲ್ಲಿ ಬ್ರಿಟಿಷ ಜೊತೆಗಿನದ್ದು ಅತಿದೊಡ್ಡದು. ಈ ಒಪ್ಪಂದದಿಂದ ಭಾರತದ ಉದ್ಯಮಗಳಿಗೆ ಹೆಚ್ಚು ಅನುಕೂಲವಾಗಲಿದೆ. ಶೇ. 99 ರಷ್ಟು ಭಾರತೀಯ ಉತ್ಪನ್ನಗಳಿಗೆ ಬ್ರಿಟನ್ ಬಹುತೇಕ ಶೂನ್ಯ ತೆರಿಗೆ ವಿಧಿಸುತ್ತದೆ. ಜವಳಿಯಿಂದ ಹಿಡಿದು ಕೃಷಿ ಉತ್ಪನ್ನಗಳವರೆಗೆ ಬಹಳಷ್ಟು ಭಾರತೀಯ ರಫ್ತುಗಳಿಗೆ ಪುಷ್ಟಿ ಸಿಗಲಿದೆ.
ಬ್ರಿಟನ್ನ ಶೇ. 90ರಷ್ಟು ಉತ್ಪನ್ನಗಳಿಗೆ ಭಾರತವೂ ಟ್ಯಾರಿಫ್ ಇಳಿಸಲಿದೆ. ಶೇ. 15ರಷ್ಟಿದ್ದ ಆಮದು ಸುಂಕವನ್ನು ಶೇ. 3ಕ್ಕೆ ಇಳಿಸಲಿದೆ.
ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಸ್ವಾಗತ
ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು ಭಾರತದ ಉದ್ಯಮ ವಲಯ ಸ್ವಾಗತಿಸಿದೆ. ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಈ ಒಪ್ಪಂದವನ್ನು ಭಾರತೀಯ ರೈತರಿಗೆ ಸಿಕ್ಕ ದೊಡ್ಡ ಗೆಲುವು ಎಂದು ಬಣ್ಣಿಸಿದ್ದಾರೆ.
‘ಶೇ. 95ರಷ್ಟು ಭಾರತೀಯ ಕೃಷಿ ಉತ್ಪನ್ನಗಳಿಗೆ ಸುಂಕ ರಹಿತ ರಫ್ತು ಅವಕಾಶ ಸಿಗುತ್ತದೆ. ಶೇ. 99ರಷ್ಟು ಮೀನು ಇತ್ಯಾದಿ ರಫ್ತುಗಳಿಗೆ ಶೂನ್ಯ ಸುಂಕ ಇದೆ’ ಎಂದು ವಾಣಿಜ್ಯ ಸಚಿವರು ತಮ್ಮ ಎಕ್ಸ್ ಪೋಸ್ಟ್ವೊಂದರಲ್ಲಿ ತಿಳಿಸಿದ್ದಾರೆ.
ಭಾರತ ಮತ್ತು ಯುಕೆ ಮುಕ್ತ ವ್ಯಾಪಾರ ಒಪ್ಪಂದವು ಬ್ರಿಟನ್ನ ಗ್ರಾಹಕರು, ಹೂಡಿಕೆದಾರರು ಹಾಗೂ ನಾವೀನ್ಯತಾ ಕೇಂದ್ರಗಳಿಗೆ (Innovative hubs) ನಮ್ಮ ಸ್ಟಾರ್ಟಪ್ಗಳನ್ನು ತಲುಪುವುದು ಹೆಚ್ಚು ಸಲೀಸಲಾಗುತ್ತದೆ’ ಎಂದು ಅದೇ ಪೋಸ್ಟ್ನಲ್ಲಿ ಪೀಯೂಶ್ ಗೋಯಲ್ ವಿವರಿಸಿದ್ದಾರೆ.
ಭಾರತೀಯ ಕೈಗಾರಿಕಾ ಒಕ್ಕೂಟ ಸ್ವಾಗತ: ಭಾರತ ಮತ್ತು ಯುಕೆ ಫ್ರೀ ಟ್ರೇಡ್ ಅಗ್ರೀಮೆಂಟ್ ನಮ್ಮ ದ್ವಿಪಕ್ಷೀಯ ಸಂಬಂಧದ ಬಹಳ ದೊಡ್ಡ ಕ್ಷಣವಾಗಿದೆ ಎಂದು ಭಾರತೀಯ ಉದ್ಯಮದ ಮಹಾ ಒಕ್ಕೂಟವಾದ ಸಿಐಐನ ಮಹಾನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಹೇಳಿದ್ದಾರೆ.




