ದಕ್ಷಿಣ ಕೊರಿಯಾ ಭೀಕರ ವಿಮಾನ ದುರಂತ: 181 ಜನರಲ್ಲಿ 179 ಮಂದಿ ಸಾವು

south korea

ಸಿಯೋಲ್​(ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಭೀಕರ ವಿಮಾನ ದುರಂತ ಸಂಭವಿಸಿದೆ. ವಿಮಾನದಲ್ಲಿದ್ದ 181 ಜನರ ಪೈಕಿ 179 ಜನ ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ಹೇಳಿದೆ.

ದುರಂತದಲ್ಲಿ ಜೆಜು ಏರ್ ವಿಮಾನ ಸಂಪೂರ್ಣ ಸುಟ್ಟು ಹೋಗಿದೆ. ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ಹೊರತುಪಡಿಸಿ ಎಲ್ಲ 179 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಕ್ಕಿ ಡಿಕ್ಕಿ ಹಾಗೂ ಪ್ರತಿಕೂಲ ವಾತಾವರಣ ವಿಮಾನ ಅಪಘಾತಕ್ಕೆ ಕಾರಣವಾಗಿರಬಹುದು. ಆದರೆ ತನಿಖೆ ಬಳಿಕವೇ ಸೂಕ್ತ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಆಗಿದ್ದೇಗೆ ?: ದಕ್ಷಿಣ ಕೊರಿಯಾದ ನೈರುತ್ಯದಲ್ಲಿರುವ ಮುವಾನ್ ವಿಮಾನ ನಿಲ್ದಾಣದಲ್ಲಿ ಜೆಜು ಏರ್ ವಿಮಾನದ ಲ್ಯಾಂಡಿಂಗ್ ಗೇರ್ ಫೇಲ್ ಆದ ಪರಿಣಾಮ ಈ ದುರಂತ ನಡೆದಿದೆ ಎಂದು ಆರಂಭದಲ್ಲಿ ಅಧಿಕಾರಿಗಳು ಅಂದಾಜಿಸಿದ್ದರು.

ಏರ್ಪೋ​ರ್ಟ್​ ರನ್​ವೇಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ರನ್​ವೇಗೆ ಅಪ್ಪಳಿಸಿ ಬಳಿಕ ಕೊನೆಯಲ್ಲಿದ್ದ ಬೇಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ತುರ್ತು ಸೇವಾ ಕಚೇರಿ ಮಾಹಿತಿ ನೀಡಿದೆ.

ಈ ವಿಮಾನ ಬ್ಯಾಂಕಾಕ್‌ನಿಂದ ದಕ್ಷಿಣ ಕೊರಿಯಾಕ್ಕೆ ಆಗಮಿಸಿದ ವೇಳೆ ಘಟನೆ ನಡೆದಿದೆ. ಬೆಂಕಿ ನಂದಿಸಲು 32 ಅಗ್ನಿಶಾಮಕ ವಾಹನಗಳು ಮತ್ತು ಹೆಲಿಕಾಪ್ಟರ್​ಗಳನ್ನು ನಿಯೋಜಿಸಲಾಗಿತ್ತು.

ಘಟನೆಯ ಲೈವ್​ ವಿಡಿಯೋವನ್ನು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ಬಿತ್ತರಿಸಿದೆ. ವಿಡಿಯೋದಲ್ಲಿ ವಿಮಾನ ರನ್​ವೇಗೆ ಅಪ್ಪಳಿಸಿ ಬಳಿಕ ವೇಗದಲ್ಲಿ ಚಲಿಸುತ್ತಿದ್ದು, ಈ ವೇಳೆ ಅದರಲ್ಲಿ ಹೊಗೆ ಕಾಣಿಸಿಕೊಂಡಿದೆ. ಬಳಿಕ ಕೊನೆಯಲ್ಲಿದ್ದ ಗೋಡೆಗೆ ಗುದ್ದಿ ಬೆಂಕಿ ಹೊತ್ತುಕೊಂಡು ಸುಟ್ಟು ಹೋಗಿರುವುದು ವಿಡಿಯೋದಲ್ಲಿ ಗಮನಿಸಬಹುದು.

ರಕ್ಷಣಾ ಕಾರ್ಯಾಚರಣೆಗೆ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು, ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರಕ್ಷಿಸುವಂತೆ ದಕ್ಷಿಣ ಕೊರಿಯಾ ಉಪ ಪ್ರಧಾನಿ ಚೊಯ್ ಸ್ಯಾಂಗ್ ಮೊಕ್ ಅವರು ಅಧಿಕಾರಿಗಳಿಗೆ ಆದೇಶಿಸಿದ್ದರು

ವಿಮಾನ ಪತನದಿಂದ ಉಂಟಾಗಿರುವ ಪ್ರಾಣಹಾನಿಯ ಬಗ್ಗೆ ಕಳವಳ ವಕ್ತಪಡಿಸಿ ಜೆಜು ಏರ್ ಸಂಸ್ಥೆ ಕ್ಷಮೆಯಾಚಿಸಿದೆ. ಜೊತೆಗೆ ರಕ್ಷಣಾ ಕಾರ್ಯಚರಣೆ ಮತ್ತು ಅಪಘಾತ ಸಂಬಂಧ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ತಿಳಿಸಿದೆ.

Leave a Reply

Your email address will not be published. Required fields are marked *