ಮುಡಾ ಚರ್ಚೆಗೆ ಮತ್ತೊಮ್ಮೆ ಅವಕಾಶ ನಿರಾಕರಿಸಿದ ಸಭಾಪತಿ : ಸದನದಲ್ಲಿ ಧರಣಿ ಮುಂದುವರಿಕೆ

ಬೆಂಗಳೂರು: ಮೈಸೂರಿನ ಮುಡಾ ಹಗರಣ ಆರೋಪ ಕುರಿತ ಚರ್ಚೆಗೆ ಅವಕಾಶ ನಿರಾಕರಿಸಿದ್ದ ರೂಲಿಂಗ್​​ಅನ್ನು ಮರುಪರಿಶೀಲಿಸಲು ಬಿಜೆಪಿ ಜೆಡಿಎಸ್ ನೀಡಿದ್ದ ಕೋರಿಕೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ತಿರಸ್ಕರಿಸಿ ಮತ್ತೊಮ್ಮೆ ರೂಲಿಂಗ್ ನೀಡಿದರು. ಇದರಿಂದಾಗಿ ಬಿಜೆಪಿ ಜೆಡಿಎಸ್ ಸದಸ್ಯರು ಸದನದ ಬಾವಿಯಲ್ಲಿ ಧರಣಿ ಮುಂದುವರೆಸಿದರು.

ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಯಲ್ಲಿ ಬಿಜೆಪಿ ಜೆಡಿಎಸ್ ಧರಣಿ ಮುಂದುವರೆಸಿದರು. ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಸಿ ಟಿ ರವಿ, ಸಿಎಂ ಹುಲಿಯಾ ಆದರೆ ಚರ್ಚೆಗೆ ಅವಕಾಶ ನೀಡುತ್ತಾರೆ, ಇಲ್ಲದಿದ್ದರೆ ಇಲಿಯಾ ಆಗಲಿದ್ದಾರೆ. ಆದರೆ ಸಿಎಂ ಓಡಿ ಹೋಗುವವರಲ್ಲ, ಚರ್ಚೆಗೆ ಅವಕಾಶ ನೀಡಿ ಎಂದು ನಿಮಗೂ ಅವರು ಸಲಹೆ ನೀಡಲಿದ್ದಾರೆ ಎಂದರು.

ಇದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ನಿಮ್ ಮಾತು ಕೇಳಿ ಮರದಲ್ಲಿರುವ ಮಂಗನೂ ಕೈ ಬಿಡ್ತಾವೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಶ್ಯೂ ಅಲ್ಲದೇ ಇರುವುದನ್ನು ಇಶ್ಯೂ ಮಾಡಿದ್ದೀರಿ, ವೈಯಕ್ತಿಕವಾಗಿ ತೆಗೆದುಕೊಂಡಿದ್ದೀರಿ, ಕಾನೂನು ರೀತಿ ಎಲ್ಲ ಸರಿ ಇದ್ದರೂ ವಿಷಯ ತೆಗೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗಲೇ ನಿವೇಶನ ಕೊಟ್ಟಿದ್ದಾರೆ, ನಾವು ಇಂತಾ ಕಡೆ ಕೊಡಿ ಎಂದು ಕೇಳಿದ್ದೆವಾ? 2021 ರಲ್ಲಿ ಯಾರು ಅಧಿಕಾರದಲ್ಲಿದ್ದರು? ಬಿಜೆಪಿಯವರು ಅಧಿಕಾರದಲ್ಲಿದ್ದು, ನಿಮ್ಮ ಕಾಲದಲ್ಲಿ ಮಾಡಿದ ತಪ್ಪು ಅದು. ‌ಮುಡಾದವರು ಮಾಡಿಕೊಟ್ಟಿದ್ದಾರೆ, ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದೇವೆ. ಹಾಗಾಗಿ ಸಭಾಪತಿ ಚರ್ಚೆಗೆ ಅವಕಾಶ ನಿರಾಕರಿಸಿದ್ದು ಸರಿಯಾಗಿದೆ. ಚರ್ಚೆಗೆ ಅವಕಾಶವಿಲ್ಲ, ಸರಿಯಾದ ತೀರ್ಮಾನವಾಗಿದೆ ಎಂದು ಸಮರ್ಥಿಸಿಕೊಂಡರು.

ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಿಎಂ ಹೇಳಿಕೆಗೆ ಆಕ್ಷೇಪಿಸಿದರು. ಸಿಎಂ ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ ಎಂದಿದ್ದಾರೆ, ಇಲ್ಲಿ ಎಲ್ಲಿ ವೈಯಕ್ತಿಕ ಇದೆ ಎಂದರು. ಇದಕ್ಕೆ ತಿರುಗೇಟು ನೀಡಿದ ಸಿಎಂ, ನಾವು ಅರ್ಜಿ ಕೊಟ್ಟಿದ್ದೆವು, ಮುಡಾದವರು ಕೊಟ್ಟಿದ್ದಾರೆ, ಯಾರು ಅಧಿಕಾರದಲ್ಲಿದ್ದವರು? ನೀವು ಮಾಡಿದ ತಪ್ಪು ಅದು, ವಿಜಯನಗರದಲ್ಲೇ ಕೊಡಿ, ಅಲ್ಲಿಯೇ ಕೊಡಿ, ಇಲ್ಲಿಯೇ ಕೊಡಿ ಎಂದು ನಾವು ಕೇಳಿಲ್ಲ. ಜಮೀನು ಕಳೆದುಕೊಂಡಿದ್ದೇವೆ, ನಿವೇಶನ ಕೊಡಿ ಎಂದಷ್ಟೇ ಕೇಳಿದ್ದೆವು. ಶೇ.50 ರ ಅನುಪಾತದಂತೆ ನಿವೇಶನಕ್ಕೆ ಒಪ್ಪಿ ಪಡೆದುಕೊಂಡಿದ್ದೇವೆ, ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ. ನಾನ್ ಇಶ್ಯೂನ ಇಶ್ಯೂ ಮಾಡುತ್ತಿರುವುದನ್ನು ಖಂಡಿಸುತ್ತೇನೆ, ಸಚಿವನಾಗಿ ನಾನು 40 ವರ್ಷವಾಗಿದೆ ಈವರೆಗೂ ಒಂದು ಕಪ್ಪುಚುಕ್ಕೆ ಇಲ್ಲ, ಅವರಿಗೆ ಹೊಟ್ಟೆ ಕಿಚ್ಚು ಹೊಟ್ಟೆ ಉರಿ ಅದಕ್ಕಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *