ದೆಹಲಿ: ವಿವಾದಿತ ಯೂಟ್ಯೂಬರ್ ಮತ್ತು ಸ್ವತಂತ್ರ ಪತ್ರಕರ್ತ ಅಜಿತ್ ಭಾರ್ತಿ ಅವರಿಗೆ ನೋಟಿಸ್ ನೀಡಲು ಕರ್ನಾಟಕ ಪೊಲೀಸ್ ಉತ್ತರ ಪ್ರದೇಶಕ್ಕೆ ಹೋಗಿದ್ದಾರೆ. ಇದರ ಬೆನ್ನಲ್ಲೇ ನೋಯ್ಡಾದಲ್ಲಿರುವ ಭಾರ್ತಿ ನಿವಾಸದ ಮುಂದೆ ಕರ್ನಾಟಕ ಪೊಲೀಸರು ನಿಂತಿರುವ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.ಕರ್ನಾಟಕದ ಪೊಲೀಸರು ಇಲ್ಲೇನು ಮಾಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಮಂದಿ ಪ್ರಶ್ನಿಸಿದ್ದಾರೆ. ಅಂದ ಹಾಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಕರ್ನಾಟಕ ಪೊಲೀಸರು ಇತ್ತೀಚೆಗೆ ಬೆಂಗಳೂರಿನಲ್ಲಿ ಅಜೀತ್ ಭಾರ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನ್ನ ನಿವಾಸಕ್ಕೆ ಬಂದ ಕರ್ನಾಟಕ ಪೊಲೀಸರನ್ನು ನೋಯ್ಡಾ ಪೊಲೀಸರು ತಮ್ಮ ಜತೆ ಕರೆದೊಯ್ದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಯೂಟ್ಯೂಬರ್ನ ಮನೆಯ ಹೊರಗೆ ಕರ್ನಾಟಕ ಪೊಲೀಸರು ಮತ್ತು ನೋಯ್ಡಾ ಪೊಲೀಸರ ನಡುವೆ ಮುಖಾಮುಖಿಯಾಗಿದೆ. ಕರ್ನಾಟಕ ಪೊಲೀಸರನ್ನು ತನ್ನ ಮನೆಗೆ ಪ್ರವೇಶಿಸಲು ಅವರು ಅನುಮತಿಸಲಿಲ್ಲ ಎಂದು ಭಾರ್ತಿ ಹೇಳಿದ್ದು, ನೋಯ್ಡಾ ಪೊಲೀಸರು ಸಮಯಕ್ಕೆ ಮಧ್ಯಪ್ರವೇಶಿಸಿ ಕ್ರಮ ಕೈಗೊಂಡರು ಎಂದು ಹೇಳಿದ್ದಾರೆ. ಅದೇ ವೇಳೆ ಪತ್ರಕರ್ತ, ಫ್ಯಾಕ್ಟ್ ಚೆಕರ್ ಮೊಹಮ್ಮದ್ ಜುಬೇರ್ ವಿರುದ್ಧ ಪ್ರಕರಣ ದಾಖಲಿಸುವುದಾಗಿಯೂ ಯೂಟ್ಯೂಬರ್ ತನ್ನ ಕಾಮೆಂಟ್ನಲ್ಲಿ ಹೇಳಿದ್ದಾರೆ.
ಗುರುವಾರ ಅಜಿತ್ ಭಾರ್ತಿ ಅವರ ಮನೆಯ ಬಾಲ್ಕನಿಯಲ್ಲಿ ಮತ್ತು ಕರ್ನಾಟಕ ಪೊಲೀಸ್ ಅಧಿಕಾರಿಗಳು ಅವರ ಮನೆಯ ಗೇಟ್ನಲ್ಲಿ ನಿಂತಿರುವುದನ್ನು ತೋರಿಸುವ ವಿಡಿಯೊ ಎಕ್ಸ್ನಲ್ಲಿ ವೈರಲ್ ಆಗಿತ್ತು. ನನಗೆ ನೋಟಿಸ್ ನೀಡಲು ಕರ್ನಾಟಕ ಪೊಲೀಸರಿಂದ ಮೂವರು ಪೊಲೀಸರು ತಮ್ಮ ನೋಯ್ಡಾ ನಿವಾಸಕ್ಕೆ ಅನಿರೀಕ್ಷಿತವಾಗಿ ಬಂದಿದ್ದಾರೆ ಎಂದು ಭಾರ್ತಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಕೆಲಸವನ್ನು ಅವರು ಇಮೇಲ್ನಲ್ಲಿಯೂ ಮಾಡಬಹುದಿತ್ತು. ಇದು ನನ್ನನ್ನು ಬೆದರಿಸುವ ಪ್ರಯತ್ನ ಎಂದು ಸೂಚಿಸುತ್ತಿದೆ ಎಂದಿದ್ದಾರೆ ಭಾರ್ತಿ.