ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ಕಳೆದ ರಾತ್ರಿ ಗಣಪತಿ ಮೂರ್ತಿ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದಿದೆ. ಈ ಘಟನೆಯಲ್ಲಿ ಪೊಲೀಸರಿಗೆ ಗಾಯಗಳಾಗಿವೆ. ದುಷ್ಕರ್ಮಿಗಳು ಕೆಲವು ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ನಾಗಮಂಗಲದ ಬದರಿಕೊಪ್ಪಲಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಬುಧವಾರ (ನಿನ್ನೆ) ರಾತ್ರಿ ಮೂರ್ತಿಯ ನಿಮಜ್ಜನಾ ಮೆರವಣಿಗೆ ಅನ್ಯಕೋಮಿನ ಪ್ರಾರ್ಥನಾ ಮಂದಿರದ ಬಳಿ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಕೆಲವು ಕಿಡಿಗೇಡಿಗಳು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
3 ದಿನ 144 ಸೆಕ್ಷನ್ ಜಾರಿ- ಐಜಿಪಿ: “ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಕೆಲವು ಅಂಗಡಿ ಮತ್ತು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ. ಎಲ್ಲೆಡೆ ಭದ್ರತೆ ನೀಡಿದ್ದೇವೆ. ಪರಿಸ್ಥಿತಿ ಹತೋಟಿಗೆ ಬಂದಿದೆ. ಮೂರು ದಿನಗಳವರೆಗೆ 144 ಸೆಕ್ಷನ್ ಜಾರಿ ಮಾಡಿದ್ದೇವೆ. ಗಲಾಟೆಯ ವೇಳೆ ಮಚ್ಚು, ಲಾಂಗು, ಪೆಟ್ರೋಲ್ ಬಾಂಬ್ ಬಳಸಿರುವ ಬಗ್ಗೆ ಮಾಹಿತಿ ಇಲ್ಲ. ಕೆಲವರನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದೇವೆ” ಎಂದು ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ ತಿಳಿಸಿದರು.
ಕಳೆದ ವರ್ಷವೂ ಗಲಾಟೆ: ನಾಗಮಂಗಲದಲ್ಲಿ ಗಣೇಶೋತ್ಸವ ವೇಳೆ ಈ ರೀತಿಯ ಸಂಘರ್ಷ ಇದು ಮೊದಲಲ್ಲ. ಕಳೆದ ವರ್ಷವೂ ಮೆರವಣಿಗೆ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಬಳಿಕ ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಂಡು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.