ಮಹಿಳೆಯ ಹಕ್ಕುಗಳಿಗೆ ಸುಪ್ರೀಂ ಕೋರ್ಟ್ ಬಲ.

ಮಹಿಳೆಯ ಹಕ್ಕುಗಳಿಗೆ ಸುಪ್ರೀಂ ಕೋರ್ಟ್ ಬಲ.

30ನೇ ವಾರದಲ್ಲೂ ಗರ್ಭಪಾತಕ್ಕೆ ಅವಕಾಶ; ತಾಯಿಯ ನಿರ್ಧಾರವೇ ಅಂತಿಮ.

ನವದೆಹಲಿ : ಒಂದುವೇಳೆ ಗರ್ಭಿಣಿಗೆ ಏಳೂವರೆ ತಿಂಗಳು ತುಂಬಿದ ಬಳಿಕವೂ ಆ ಮಗು ಬೇಡವೆನಿಸಿದರೆ ಗರ್ಭಪಾತ ಮಾಡಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಭಾರತದಲ್ಲಿ 5 ತಿಂಗಳವರೆಗೆ ಮಾತ್ರ ಗರ್ಭಪಾತಕ್ಕೆ ಅನುಮತಿಯಿದೆ. ಆದರೆ, ಇದೀಗ ವಿಶೇಷ ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಹುಟ್ಟದೇ ಇರುವ ಮಗುವಿನ ಹಕ್ಕಿಗಿಂತಲೂ ತಾಯಿಯ ಹಕ್ಕು ಬಹಳ ಮುಖ್ಯ ಎಂದು ಹೇಳಿರುವ ನ್ಯಾಯಪೀಠ ಮಹಿಳೆಯನ್ನು ತಾಯಿಯಾಗಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಮದುವೆಯಾದ ಮಹಿಳೆಯಾಗಲಿ, ಮದುವೆಯಾಗದ ಯುವತಿಯಾಗಲಿ ಅಥವಾ ಅಪ್ರಾಪ್ತೆಯೇ ಆಗಲಿ ಅನಗತ್ಯ ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸಲು ಕಾನೂನಿಗೂ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಪ್ರಾಪ್ತ ವಯಸ್ಕಳಾಗಿದ್ದಾಗ ಗರ್ಭ ಧರಿಸಿದ ಹುಡುಗಿಯ 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್ ಈ ಹೇಳಿಕೆಗಳನ್ನು ನೀಡಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ನ್ಯಾಯಪೀಠವು ಗರ್ಭಿಣಿ ಹುಡುಗಿಯ ಸಂತಾನೋತ್ಪತ್ತಿ ಸ್ವಾಯತ್ತತೆಗೆ ಸರಿಯಾದ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಒತ್ತಿ ಹೇಳಿದೆ. ವಿಶೇಷವಾಗಿ ಅವಳಿಗೆ ಮಗುವನ್ನು ಹೆರಲು ಇಷ್ಟವಿಲ್ಲವೆಂದು ಸ್ಪಷ್ಟವಾಗಿ ಹೇಳುತ್ತಿರುವಾಗ ಆ ಮಗುವನ್ನು ಹೆರಲೇಬೇಕೆಂದು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಅರ್ಜಿ ಸಲ್ಲಿಸಿರುವ ಅಪ್ರಾಪ್ತ ಯುವತಿಯ ವಯಸ್ಸು ಮತ್ತು ಆಕೆಯ ಹಕ್ಕನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಪು ನೀಡಲಾಗಿದೆ. ಈ ಪ್ರಕರಣದಲ್ಲಿ ಆ ಯುವತಿಯದ್ದು ಉದ್ದೇಶಪೂರ್ವಕವಾದ ಗರ್ಭಧಾರಣೆ ಅಲ್ಲದ ಕಾರಣದಿಂದ ಮತ್ತು ಆ ಹುಡುಗಿ ಮಗುವನ್ನು ಹೆರಲು ಬಯಸದ ಕಾರಣದಿಂದ ಆಕೆಗೆ ಗರ್ಭಪಾತಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕೋರ್ಟ್ ಹೇಳಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *