ಸುಕ್ಕಾ ಸೂರಿ ಕನ್ನಡ ಚಿತ್ರರಂಗದ ಭಿನ್ನ ದನಿಯ ನಿರ್ದೇಶಕ. ಅವರ ಸಿನಿಮಾ ಕಟ್ಟುವ ರೀತಿಗೆ, ಕತೆ ಹೇಳುವ ಪರಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಆದರೆ ಯಾಕೋ ಇತ್ತೀಚೆಗೆ ಯಶಸ್ಸು ಸುಕ್ಕಾ ಸೂರಿಯ ಕೈ ಹಿಡಿದಿಲ್ಲ. ಸೂರಿ ನಿರ್ದೇಶಿಸಿದ್ದ ಈ ಹಿಂದಿನ ಸಿನಿಮಾ ‘ಬ್ಯಾಡ್ ಮ್ಯಾನರ್ಸ್’ ಫ್ಲಾಪ್ ಆಯ್ತು. ಭಾರಿ ನಿರೀಕ್ಷೆಯನ್ನು ಅಭಿಮಾನಿಗಳು ಈ ಸಿನಿಮಾ ಮೇಲಿರಿಸಿದ್ದರು. ಆದರೆ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಇದೀಗ ಸೂರಿ ಹೊಸ ಸಿನಿಮಾಕ್ಕೆ ಕೈ ಹಾಕಿದ್ದು, ಕನ್ನಡದ ಸ್ಟಾರ್ ನಟರೊಬ್ಬರೊಟ್ಟಿಗೆ ಮಾತುಕತೆ ಚಾಲ್ತಿಯಲ್ಲಿದೆ.
ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಳ್ಳುತ್ತಿರುವ ಧ್ರುವ ಸರ್ಜಾ ಅವರೊಟ್ಟಿಗೆ ಸಿನಿಮಾ ಮಾಡಲು ಸೂರಿ ಮುಂದಾಗಿದ್ದಾರೆ. ಕೆಲ ಮೂಲಗಳ ಪ್ರಕಾರ ಇಬ್ಬರ ನಡುವೆ ಒಂದು ಹಂತದ ಮಾತುಕತೆ ಪೂರ್ಣವಾಗಿದೆಯಂತೆ. ಧ್ರುವ ಅವರ ಇಮೇಜಿಗೆ ತಕ್ಕಂತೆ ಆಕ್ಷನ್ ಸಿನಿಮಾ ನಿರ್ದೇಶಿಸಲು ಸೂರಿ ಮುಂದಾಗಿದ್ದಾರೆ. ಸೂರಿಯ ಭಿನ್ನ ಸಿನಿಮಾ ಮೇಕಿಂಗ್ ಮತ್ತು ಧ್ರುವ ಅವರ ಪವರ್ ಹೌಸ್ ಆಕ್ಷನ್ ಇಮೇಜು ಎರಡಕ್ಕೂ ಹೊಂದಿಕೆ ಆಗುವ ಕತೆ ತೆರೆಯ ಮೇಲೆ ಬರಲಿದೆ ಎನ್ನಲಾಗುತ್ತಿದೆ.
ಸೂರಿ ಅವರು ಯುವ ರಾಜ್ಕುಮಾರ್ ಅವರಿಗಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ‘ಎಕ್ಕ’ ಸಿನಿಮಾದ ಬಿಡುಗಡೆ ಬಳಿಯ ಸೂರಿ ಮತ್ತು ಯುವರಾಜ್ ಕುಮಾರ್ ಅವರ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿತ್ತು. ಆದರೆ ಆ ಸಿನಿಮಾ ಕಾರಣಾಂತರಗಳಿಂದಾಗಿ ಮುಂದೆ ಹೋಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಯುವ ರಾಜ್ಕುಮಾರ್ ಅವರ ಬೇರೆ ಸಿನಿಮಾದ ಕಮಿಟ್ಮೆಂಟ್ ನಿಂದಾಗಿ ಸೂರಿ ಜೊತೆಗಿನ ಸಿನಿಮಾ ಮುಂದೂಡಲ್ಪಟ್ಟಿದೆ ಎಂಬ ಸುದ್ದಿ ಇದೆ.
ಇನ್ನು ಧ್ರುವ ಸರ್ಜಾ ಪ್ರಸ್ತುತ ‘ಕೆಡಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರೇಮ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಸಂಜಯ್ ದತ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರೀಷ್ಮಾ ನಾಣಯ್ಯ, ಅಭಿಜಿತ್ ಇನ್ನೂ ಕೆಲವು ಪ್ರಮುಖ ನಟರುಗಳು ನಟಿಸಿದ್ದಾರೆ. ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.
‘ದುನಿಯಾ’, ‘ಟಗರು’, ‘ಅಣ್ಣಾ ಬಾಂಡ್’, ‘ಜಾಕಿ’, ‘ಕಡ್ಡಿಪುಡಿ’, ‘ಜಂಗ್ಲಿ’, ‘ಕೆಂಡಸಂಪಿಗೆ’, ‘ಪಾಪ್ ಕಾರ್ನ್ ಮಂಕಿ ಟೈಗರ್’ ಅಂಥಹಾ ಸಿನಿಮಾಗಳನ್ನು ನೀಡಿರುವ ಸೂರಿಗೆ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಸೋಲಿನಿಂದ ಸಣ್ಣ ಹಿನ್ನಡೆ ಆಗಿದ್ದು, ಈಗ ಮತ್ತೊಂದು ಹಿಟ್ ಮೂಲಕ ರೀಎಂಟ್ರಿಗೆ ಸಜ್ಜಾಗುತ್ತಿದ್ದಾರೆ.
For More Updates Join our WhatsApp Group :