ಚನ್ನಪಟ್ಟಣ: ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಸಾರ್ವಜನಿಕರ ಕುಂದುಕೊರತೆ ಪರಿಹರಿಸಲು ಲಂಚ ಪಡೆಯುತ್ತಿರುವ ಕುರಿತು ಆರೋಪ ಕೇಳಿಬಂದರೆ ಅಂಥವರನ್ನು ಕೂಡಲೇ ಅಮಾನತು ಮಾಡಲಾಗುವುದು ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಬೇವೂರು ಹಾಗೂ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರ ಸೇವೆ ಮಾಡಲೆಂದೇ ಆ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಆ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕು. ನೊಂದ ಜನರಿಗೆ ಸಹಾಯ ಮಾಡಬೇಕು ಎಂದು ಸೂಚನೆ ನೀಡಿದರು.
ಸಾಲ, ಸೌಲಭ್ಯ, ನಿವೇಶನ, ವಸತಿ, ರಸ್ತೆ, ಸ್ಮಶಾನ, ಅಂತರ್ಜಲ ಹೆಚ್ಚಿಸುವ ಬೇಡಿಕೆ, ಪಿಂಚಣಿ, ಬರ ಪರಿಹಾರ, ಪೋಡಿ, ಖಾತೆ ಬದಲಾವಣೆ ಕುರಿತಾಗಿ ಕಾರ್ಯಕ್ರಮದಲ್ಲಿ ಇದೂವರೆಗೂ ಸುಮಾರು ಮೂರು ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಅಧಿಕಾರಿಗಳು ಪರಿಶೀಲಿಸಿ ಅವರ ಸಮಸ್ಯೆಗೆ ಪರಿಹಾರ ನೀಡಬೇಕು. ಅವರ ಸಮಸ್ಯೆ, ಅಹವಾಲುಗಳಿಗೆ ಸ್ಪಂದಿಸಬೇಕು ಎಂದರು.
ರೈತರಿಗೆ ಯಾವುದೇ ವೇತನ, ಪಿಂಚಣಿ ಸೌಲಭ್ಯವಿಲ್ಲ, ಅವರಿಗೆ ನಿವೃತ್ತಿ ಇರುವುದಿಲ್ಲ. ಅವರು ತಮ್ಮ ಸಮಸ್ಯೆಯ ಪರಿಹಾರಕ್ಕಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅಧಿಕಾರಿಗಳು ಈ ಅರ್ಜಿಗಳನ್ನು ಪರಿಶೀಲಿಸಿ ರೈತರ ಸಮಸ್ಯೆಗೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ನೀಡುತ್ತಾರೆ. ಜನರಿಗೆ ಹಲವು ನಿಗಮಗಳಿಂದ ಒಂದು ಲಕ್ಷ ರೂ.ಗಳ ವರೆಗೆ ಸಾಲ ಸೌಲಭ್ಯ ನೀಡುವ ಅವಕಾಶವಿದೆ. ಸಬ್ಸಿಡಿ ರೂಪದಲ್ಲಿ ಸಾಲ ನೀಡಲು ಅವಕಾಶವಿದೆ. ಇದನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಜನರ ಅಭಿವೃದ್ಧಿಗಾಗಿ ಸರ್ಕಾರ ಸದಾ ಬದ್ಧವಾಗಿದೆ. ಜನರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ನಿವೇಶನ ಇಲ್ಲದ ಜನರಿಗೆ ನಿವೇಶನ ಹಂಚಿಕೆ ಮಾಡಲು ಸ್ಥಳ ಗುರುತಿಸಲಾಗುತ್ತಿದೆ. ಸರ್ಕಾರಿ ಸ್ಥಳ ಸಿಗದಿದ್ದರೆ ಖಾಸಗಿಯಾಗಿ ಖರೀದಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಸಿ.ಎಸ್.ಆರ್. ಮಾದರಿಯಲ್ಲಿ ಹಲವು ಶಾಲೆಗಳ ನಿರ್ಮಾಣವಾಗಿದೆ. ಖಾಸಗಿಯವರಿಮದಲೂ ಈ ಶಾಲೆಗಳ ನಿರ್ಮಾಣಕ್ಕೆ ಸಹಕಾರವಿದೆ. ಮುಂದಿನ ದಿನಗಳಲ್ಲಿ ರೂ. 150-200 ಕೋಟಿ ವಿಶೇಷ ಅನುದಾನದಿಂದ ವಿವಿಧ ರೀತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್. ರವಿ, ರಾಮೋಜಿ ಗೌಡ, ಮಾಜಿ ಶಾಸಕರಾದ ಎಚ್.ಎಂ. ರೇವಣ್ಣ, ಎಂ.ಸಿ. ಅಶ್ವಥ್, ಬೆಂಗಳೂರು ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಅಧ್ಯಕ್ಷ ರಘುನಂದನ್ ರಾಮಣ್ಣ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಬೇವೂರು ಗ್ರಾ.ಪಂ. ಅಧ್ಯಕ್ಷೆ ಮಂಗಳಮ್ಮ, ನಾಗವಾರ ಗ್ರಾ.ಪಂ. ಅಧ್ಯಕ್ಷ ಹರೀಶ್ ಕುಮಾರ್, ಹಾಗೂ ಇತರೆ ಗಣ್ಯರು ವೇದಿಕೆಯಲ್ಲಿದ್ದರು.