ಬ್ರಿಡ್ಜ್‌ಟೌನ್(ಬಾರ್ಬಡೋಸ್): 2024ರ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸಜ್ಜಾಗಿವೆ. ದಶಕದ ಬಳಿಕ ಐಸಿಸಿ ಪ್ರಶಸ್ತಿಯ ಬರ ನೀಗಿಸುವ ಹುಮ್ಮಸ್ಸಿನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇದ್ದರೆ, ಎದುರಾಳಿ ಹರಿಣಗಳು ತಮ್ಮ ಮೊದಲ ವಿಶ್ವ ಟಿ-20 ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.
ಇಲ್ಲಿನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಜೂನ್ 29ರಂದು ಫೈನಲ್ ಪಂದ್ಯ ನಡೆಯಲಿದೆ. ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಂತೆಯೇ ಅಜೇಯರಾಗಿ ಟಿ-20 ವಿಶ್ವಕಪ್ ಫೈನಲ್ ಹಂತಕ್ಕೆ ರೋಹಿತ್ ಶರ್ಮಾ ಬಳಗ ತಲುಪಿದೆ. ಟ್ರೋಫಿ ಗೆಲ್ಲುವ ಹಾದಿಯಲ್ಲಿ ಆಸ್ಟ್ರೇಲಿಯಾ ಎಂಬ ಬಲಿಷ್ಠ ಎದುರಾಳಿಯನ್ನು ಈ ಬಾರಿ ಟೀಂ ಇಂಡಿಯಾ ಹೊಂದಿಲ್ಲ. ಬದಲಿಗೆ, ದಶಕಗಳ ಕಾಲ ಐಸಿಸಿ ಟ್ರೋಫಿಯನ್ನೇ ಕಾಣದ ದಕ್ಷಿಣ ಆಫ್ರಿಕಾದೊಂದಿಗೆ ಪ್ರಶಸ್ತಿಗಾಗಿ ಹೋರಾಟ ಏರ್ಪಟ್ಟಿದೆ.
1998ರ ಚಾಂಪಿಯನ್ಸ್ ಟ್ರೋಫಿಯಲ್ಲಿ (ಆಗಿನ ಐಸಿಸಿ ನಾಕ್-ಔಟ್ ಟ್ರೋಫಿ) ಹರಿಣಗಳು ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಇದರ ನಂತರ ತಂಡ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಅಲ್ಲದೇ, ಪ್ರತಿ ಸೆಮಿ ಫೈನಲ್‌ನಲ್ಲಿ ಸೋಲುವ ಮೂಲಕ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣದಲ್ಲಿ ‘ಚೋಕರ್ಸ್’ ಎಂಬ ಹಣೆಪಟ್ಟಿ ಹೊಂದಿದ್ದರು. ಆದರೆ, ಈಗ ‘ಚೋಕರ್ಸ್’ ಅಪಖ್ಯಾತಿಯನ್ನು ಅಳಿಸಿ ಹಾಕಿ ತಮ್ಮದೇ ಆದ ಭರವಸೆ ಮತ್ತು ಕನಸುಗಳೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ
ತಂಡಗಳು ಇಂತಿವೆ:
ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಯಜ್ವೇಂದ್ರ ಚಹಾಲ್, ಸಂಜು ಸ್ಯಾಮ್ಸನ್, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಆನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ, ಒಟ್ನೀಲ್ ಬಾರ್ಟ್‌ಮನ್, ಜೆರಾಲ್ಡ್ ಕೋಟ್ಜೆ ಫಾರ್ಟುಯಿನ್, ರಯಾನ್ ರಿಕೆಲ್ಟನ್.
ಸ್ಥಳ: ಕೆನ್ಸಿಂಗ್ಟನ್ ಓವಲ್, ಬ್ರಿಡ್ಜ್‌ಟೌನ್
ದಿನಾಂಕ: ಜೂನ್ 29
ಸಮಯ: ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)