ತಿಲಕ್ ವರ್ಮಾ-ಸುಂದರ್ ಗಾಯದ ಕಾರಣ ವಿಶ್ವಕಪ್ ಕಣಕ್ಕಿಳಿಯೋದು ಅನುಮಾನ
ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ 20 ತಂಡಗಳನ್ನು ನಾಲ್ಕು ಗ್ರೂಪ್ಗಳಾಗಿ ವಿಂಗಡಿಸಲಾಗಿದೆ. ಗ್ರೂಪ್-1 ರಲ್ಲಿ ಸ್ಥಾನ ಪಡೆದಿರುವ ಭಾರತ ತಂಡವು ಬಲಿಷ್ಠ ಪಡೆಯನ್ನು ರೂಪಿಸಿದೆ. ಆದರೆ ಈ ತಂಡದಿಂದ ಇಬ್ಬರು ಆಟಗಾರರು ಹೊರಗುಳಿಯುವ ಸಾಧ್ಯತೆಯಿದೆ.
ಬಹುನಿರೀಕ್ಷಿತ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಶುರುವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ವಿಶ್ವಕಪ್ ಟೂರ್ನಿಯಿಂದ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಹೊರಗುಳಿಯುವ ಸಾಧ್ಯತೆಯಿದೆ. ಅದು ಸಹ ಗಾಯದ ಕಾರಣ..!
ಟಿ20 ವಿಶ್ವಕಪ್ ಟೂರ್ನಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಆಯ್ಕೆಯಾಗಿರುವ ಎಡಗೈ ದಾಂಡಿಗ ತಿಲಕ್ ವರ್ಮಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ವಿಜಯ ಹಝಾರೆ ಟೂರ್ನಿಯ ವೇಳೆ ತೊಡೆಸಂಧು ಸಮಸ್ಯೆಗೆ ಒಳಗಾಗಿದ್ದ ತಿಲಕ್ ಆಸ್ಪತ್ರೆಗೆ ದಾಖಲಾಗಿದ್ದು, ನೋವಿನ ಸಮಸ್ಯೆಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ.
ಹೀಗಾಗಿ ತಿಲಕ್ ವರ್ಮಾ ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಅತ್ತ ನ್ಯೂಝಿಲೆಂಡ್ ವಿರುದ್ಧದ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಟಿ20 ವಿಶ್ವಕಪ್ಗೆ ಸಜ್ಜಾಗಲಿದೆ. ಹೀಗಾಗಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಿಲಕ್ ವರ್ಮಾ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ.
ಮತ್ತೊಂದೆಡೆ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಪೆಕ್ಕೆಲುಬಿಗೆ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಕಿವೀಸ್ ವಿರುದ್ಧದ 2 ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಅಲ್ಲದೆ ಮುಂಬರುವ ಟಿ20 ಸರಣಿಯಲ್ಲೂ ಸುಂದರ್ ಕಾಣಿಸಿಕೊಳ್ಳುವುದು ಡೌಟ್.
For More Updates Join our WhatsApp Group :



