ರಾಯಚೂರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಮಾಡಿದ್ದ ಸೈಬರ್ ವಂಚಕ ಅರೆಸ್ಟ್.
ರಾಯಚೂರು: ತೆಲುಗು ಖಾಕಿ ಸಿನೆಮಾ ಶೈಲಿಯನ್ನು ನೆನಪಿಸುವಂತೆ ರಾಯಚೂರು ಸೈಬರ್ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕುಖ್ಯಾತ ಸೈಬರ್ ವಂಚಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸತತ ಎರಡು ತಿಂಗಳ ಕಾಲ ರಾಜಸ್ಥಾನದಲ್ಲಿ ಗುಪ್ತ ಕಾರ್ಯಾಚರಣೆ ನಡೆಸಿದ ಪೊಲೀಸರು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಗಳನ್ನು ಸೃಷ್ಟಿಸಿ ಜನರನ್ನು ವಂಚಿಸುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ರಾಜಸ್ಥಾನ ಮೂಲದ ಆರೋಪಿ ಅಂದರ್
ಬಂಧಿತನನ್ನು ಶಕೀಲ್ (19) ಎಂದು ಗುರುತಿಸಲಾಗಿದ್ದು, ಆತ ರಾಜಸ್ಥಾನದ ಆಳ್ವಾರ್ ಜಿಲ್ಲೆಯ ಚಂದ್ ಬಾಸ್ ಚಿರ್ ಖಾನಾ ಗ್ರಾಮದ ನಿವಾಸಿ ಎನ್ನಲಾಗಿದೆ. ಆಳ್ವಾರ್ ಹಾಗೂ ಭರತಪುರ ಜಿಲ್ಲೆಗಳು ಸೈಬರ್ ವಂಚಕರ ಕೇಂದ್ರಗಳಾಗಿದ್ದು, ಅಲ್ಲಲ್ಲಿ ಗುಂಪುಗಳಾಗಿ ಕೂತು ಆನ್‌ಲೈನ್ ವಂಚನೆ ನಡೆಸುತ್ತಿರುವ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಪೊಲೀಸ್ ಅಧಿಕಾರಿ ಹೆಸರು ಬಳಸಿ ವಂಚನೆ
ಆರೋಪಿ ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ, ನನ್ನ ಪರಿಚಯದ ಸಬ್ ಇನ್‌ಸ್ಪೆಕ್ಟರ್ ವರ್ಗಾವಣೆ ಆಗಿದೆ. ಅವರ ಏಸಿ, ಮಂಚ, ಫ್ರಿಡ್ಜ್ ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಮೆಸೇಜ್ ಕಳುಹಿಸಿ ಜನರಿಂದ ಹಣ ಪಡೆದು ವಂಚನೆ ಮಾಡುತ್ತಿದ್ದ. ಈ ವಂಚನೆಯನ್ನು ನಂಬಿ ರಾಯಚೂರಿನ ನಿವಾಸಿ ರಮೇಶ್ ಹಣ ಕಳೆದುಕೊಂಡಿದ್ದರು. ಈ ಸಂಬಂಧ ಜೂನ್ ತಿಂಗಳಲ್ಲೇ ಪ್ರಕರಣ ದಾಖಲಾಗಿತ್ತು.
ಆರೋಪಿಯನ್ನು ಪತ್ತೆ ಹಚ್ಚುವ ವೇಳೆ ಪೊಲೀಸರು ಸಿನೆಮಾ ಶೈಲಿಯಲ್ಲಿ ಅಪರಿಚಿತರಂತೆ ಓಡಾಡಿ ಚಾಣಾಕ್ಷತನದಿಂದ ಆತನನ್ನು ಲಾಕ್ ಮಾಡಿದ್ದಾರೆ. ಆರೋಪಿ ನೀಡಿದ ಮಾಹಿತಿಯ ಆಧಾರದಲ್ಲಿ, ಇತರ ಸಹಚರರನ್ನು ಬಂಧಿಸಲು ಮತ್ತೊಮ್ಮೆ ರಾಜಸ್ಥಾನಕ್ಕೆ ತೆರಳಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ರಾಯಚೂರು ಸೈಬರ್ ಪೊಲೀಸರು ತಿಳಿಸಿದ್ದಾರೆ.
For More Updates Join our WhatsApp Group :




