ಕರಾಚಿ: ಪಾಕಿಸ್ತಾನದ ಹಲವಾರು ಭಾಗಗಳಲ್ಲಿ ಬಿಸಿಲಿನ ತಾಪ ತೀವ್ರವಾಗಿದೆ. ಕಳೆದ ಎರಡು ದಿನಗಳಲ್ಲಿ ಅನೇಕ ನಾಗರಿಕರು ಮೃತಪಟ್ಟಿದ್ಧಾರೆ. ದೇಶದ ಅತಿದೊಡ್ಡ ನಗರ ಕರಾಚಿಯಲ್ಲಿ ಬಿಸಿಲಿನ ತೀವ್ರತೆ ವಿಪರೀತವಾಗಿದೆ. ನಗರದ ಹಲವೆಡೆ ಹೀಟ್ ವೇವ್ ತಾಳಲಾಗದೆ ಮೃತಪಟ್ಟವರ ಶವಗಳು ಕಂಡುಬರುತ್ತಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ. ಈವರೆಗೆ ಇಂಥ 36 ಶವಗಳು ಸಿಕ್ಕಿವೆ. ಅಪರಿಚಿತ ಶವಗಳು ಪತ್ತೆಯಾದ ನಂತರ ಸಿಂಧ್ ಪ್ರಾಂತೀಯ ಸರ್ಕಾರವು ಕರಾಚಿಯಾದ್ಯಂತ ಕನಿಷ್ಠ 77 ಬಿಸಿಲು ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ.
ಭಾನುವಾರ, ಸೋಮವಾರ ಮತ್ತು ಮಂಗಳವಾರ ಕ್ರಮವಾಗಿ ಕನಿಷ್ಠ 10, 15 ಮತ್ತು 11 ಶವಗಳು ಪತ್ತೆಯಾಗಿರುವುದನ್ನು ಕಂಡು ಸ್ಥಳೀಯ ಆಡಳಿತವೇ ಆಘಾತಕ್ಕೊಳಗಾಗಿದೆ. ಕಲ್ಯಾಣ ಸಂಸ್ಥೆಗಳು ಶವಗಳನ್ನು ಪತ್ತೆಹಚ್ಚಿದ್ದು, ಈ ಸಂಸ್ಥೆಗಳ ಆಂಬ್ಯುಲೆನ್ಸ್ಗಳು ಶವಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸುತ್ತಲೇ ಇದ್ದವು.
ಈಧಿ ಫೌಂಡೇಶನ್ ಪ್ರತಿನಿಧಿಯೊಬ್ಬರ ಪ್ರಕಾರ, ಹೆಚ್ಚಿನ ಮೃತದೇಹಗಳು ಮಾದಕವಸ್ತುಗಳ ಪ್ರಭಾವಕ್ಕೆ ಒಳಗಾದ ಜನರದ್ದಾಗಿವೆ. ಮಾದಕ ವಸ್ತುಗಳ ಸೇವನೆ ಮತ್ತು ಹೀಟ್ ವೇವ್ ಎರಡರ ಸಂಯೋಜನೆಯು ಮಾರಣಾಂತಿಕವಾಗಿದೆ ಎಂದು ಅವರು ಹೇಳಿದರು. “ಮೃತ ವ್ಯಕ್ತಿಗಳಲ್ಲಿ ಅನೇಕರು ಸಾವಿನ ಸಮಯದಲ್ಲಿ ಮಾದಕವಸ್ತುಗಳ ಪ್ರಭಾವದಲ್ಲಿದ್ದರು ಎಂದು ವರದಿಯಾಗಿದೆ. ಇದು ತೀವ್ರ ಶಾಖ ಮತ್ತು ಮಾದಕ ದ್ರವ್ಯಗಳ ದುರುಪಯೋಗದ ಮಾರಕ ಸಂಯೋಜನೆಯಾಗಿದೆ “ಎಂದು ಈಧಿ ಫೌಂಡೇಶನ್ ಪ್ರತಿನಿಧಿ ಅಜೀಮ್ ಖಾನ್ ಹೇಳಿದರು