ವಯನಾಡಿನಲ್ಲಿ ಭೀಕರ ಭೂಕುಸಿತ : 13 ವರ್ಷಗಳ ಮೊದಲೇ ಕೊಟ್ಟಿದ್ರಾ ಎಚ್ಚರಿಕೆ..?

ತಿರುವನಂತಪುರ: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೀಕರ ಭುಕುಸಿತಗಳು ಚಿತ್ರಸದೃಶ ರಮಣೀಯ ಪ್ರದೇಶವನ್ನು ಆಘಾತ ಮತ್ತು ಸಂಕಷ್ಟಕ್ಕೆ ತುತ್ತಾಗಿಸಿದೆ. ಇದರೊಂದಿಗೆ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ)ಗಳಲ್ಲಿ ವಿವೇಚನಾರಹಿತ ಕಲ್ಲು ಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳನ್ನು ನಡೆಸುವುದರ ವಿರುದ್ಧ ನಿರ್ದಿಷ್ಟವಾಗಿ ಎಚ್ಚರಿಕೆಗಳನ್ನು ನೀಡಿದ್ದ 13 ವರ್ಷಗಳಷ್ಟು ಹಿಂದಿನ ವರದಿಯೊಂದು ಮತ್ತೆ ಮುನ್ನೆಲೆಗೆ ಬಂದಿದೆ.

ಮಾಧವ ಗಾಡ್ಗೀಳ ನೇತೃತ್ವದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯು 2011ರಲ್ಲಿ ಕೇಂದ್ರಕ್ಕೆ ಸಲ್ಲಿಸಿದ್ದ ತನ್ನ ವರದಿಯಲ್ಲಿ ಮೆಪ್ಪಾಡಿಯಲ್ಲಿ ಪರಿಸರ ವಿರೋಧಿ ಚಟುವಟಿಕೆಗಳ ಬಗ್ಗೆ ನಿರ್ದಿಷ್ಟವಾಗಿ ಎಚ್ಚರಿಕೆ ನೀಡಿತ್ತು. ಇದೇ ಮೆಪ್ಪಾಡಿಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ಭೂಕುಸಿತವು ಇಡೀ ಗ್ರಾಮವನ್ನೇ ಆಪೋಷನ ಪಡೆದಿದೆ.

ವೈತಿರಿ ತಾಲೂಕಿನಲ್ಲಿರುವ ಮೆಪ್ಪಾಡಿ ಗಾಡ್ಗೀಳ ಸಮಿತಿಯು ಗುರುತಿಸಿದ್ದ ಕೇರಳದ 18 ಪರಿಸರ ಸೂಕ್ಷ್ಮಸ್ಥಳ (ಇಎಸ್‌ಎಲ್)ಗಳಲ್ಲಿ ಒಂದಾಗಿದೆ. ತಾಲೂಕಿನ ಮುಂಡಕ್ಕೈ, ಚೂರ್ಲಮಾಲಾ, ಅಟ್ಟಮಾಲಾ ಮತ್ತು ನೂಲ್ಪುಳಾ ಗ್ರಾಮಗಳೂ ಭೂಕುಸಿತದಿಂದ ಹಾನಿಗೀಡಾಗಿವೆ.

ದುರಂತವೆಂದರೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ವರದಿಯಲ್ಲಿನ ಶಿಫಾರಸುಗಳನ್ನು ಜಾರಿಗೆ ತರಲು ತಲೆ ಕೆಡಿಸಿಕೊಂಡಿರಲಿಲ್ಲ, ಬದಲಿಗೆ ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು. ಗಾಡ್ಗೀಳ ಸಮಿತಿಯು ತನ್ನ ವರದಿಯಲ್ಲಿ ಪಶ್ಚಿಮ ಘಟ್ಟಗಳಲ್ಲಿಯ ಪರಿಸರ ಸೂಕ್ಷ ಪ್ರದೇಶಗಳು ಮತ್ತು ವಲಯಗಳ ವರ್ಗೀಕರಣವನ್ನು ಪ್ರಸ್ತಾವಿಸಿತ್ತು.

ಪರಿಸರ ಸೂಕ್ಷ್ಮ ವಲಯ (ಇಎಸ್‌ಝಡ್)-1 ಮತ್ತು 2ರಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ವರದಿಯಲ್ಲಿ ಸ್ವಷ್ಟವಾಗಿ ಸೂಚಿಸಲಾಗಿತ್ತು.

‘ಇಎಸ್‌ಝಡ್-1ರಲ್ಲಿ ಕಲ್ಲು ಗಣಿಗಾರಿಕೆ ಮತ್ತು ಕೆಂಪು ವರ್ಗದ ಕೈಗಾರಿಕೆಗಳಿಗೆ ಅವಕಾಶ ನೀಡಬಾರದು ಎಂದು ನಾವು ಸೂಚಿಸಿದ್ದೆವು. ಅಲ್ಲದೆ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾದ ಪ್ರದೇಶಗಳಲ್ಲಿ ಕಲ್ಲಿನ ಕೋರೆಗಳು ಜನವಸತಿಯಿಂದ ಕನಿಷ್ಠ 100 ಮೀ.ದೂರವಿರಬೇಕು ಎಂದೂ ನಾವು ಸೂಚಿಸಿದ್ದೆವು. ಆದರೆ ನಂತರ ಸರಕಾರವು ಈ ಅಂತರವನ್ನು ಕೇವಲ 50 ಮೀ.ಗಳಿಗೆ ತಗ್ಗಿಸಿತ್ತು’ಎಂದು ಗಾಡ್ಗೀಳ ಸಮಿತಿಯ ಸದಸ್ಯ ಹಾಗೂ ಪರಿಸರವಾದಿ ವಿ.ಎಸ್.ವಿಜಯನ್ ಬೆಟ್ಟು ಮಾಡಿದರು.

ಕೇಂದ್ರ ಸರಕಾರವು ನಂತರ ಗಾಡ್ಗೀಳ ವರದಿಯನ್ನು ತಿರಸ್ಕರಿಸಿತ್ತು ಮತ್ತು ಇನ್ನೊಂದು ವರದಿಯನ್ನು ನೀಡಲು ಕಸ್ತೂರಿ ರಂಗನ್ ನೇತೃತ್ವದ ಹೊಸ ಸಮಿತಿಯನ್ನು ರಚಿಸಿತ್ತು. ಗಾಡ್ಗೀಳ ಸಮಿತಿಯು ಇಡೀ ಪಶ್ಚಿಮ ಘಟ್ಟಗಳನ್ನು ಇಎಸ್‌ಎಗಳು ಎಂದು ಅಧಿಸೂಚಿಸುವಂತೆ ಶಿಫಾರಸು ಮಾಡಿದ್ದರೆ ಕಸ್ತೂರಿ ರಂಗನ್ ಸಮಿತಿಯು ಇಎಸ್‌ಎಗಳ ವ್ಯಾಪ್ತಿಯನ್ನು ಪಶ್ಚಿಮ ಘಟ್ಟಗಳ ಶೇ.37ರಷ್ಟು ಪ್ರದೇಶಕ್ಕೆ ತಗ್ಗಿಸಿತ್ತು.

Leave a Reply

Your email address will not be published. Required fields are marked *