‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯು ಕರ್ನಾಟಕದಲ್ಲಿ ‘ಮಹಾವತಾರ ನರಸಿಂಹ’ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಈ ಸಿನಿಮಾಗೆ ಅಶ್ವಿನ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಶಿಲ್ಪಾ ಧವನ್ ಅವರು ನಿರ್ಮಾಣ ಮಾಡಿದ್ದಾರೆ. ಇದು ಆನಿಮೇಷನ್ ಚಿತ್ರವಾಗಿದ್ದು, ಕನ್ನಡದ ಜೊತೆ ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.

ಸಿನಿಪ್ರಿಯರ ಫೇವರಿಟ್ ಲಿಸ್ಟ್ನಲ್ಲಿ ‘ಭಕ್ತ ಪ್ರಹ್ಲಾದ’ ಸಿನಿಮಾ ಇಂದಿಗೂ ಸ್ಥಾನ ಪಡೆದುಕೊಂಡಿದೆ. ಆ ಸಿನಿಮಾದಲ್ಲಿ ಡಾ. ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರು ನಟಿಸಿದ್ದರು. ಈಗ ಭಕ್ತ ಪ್ರಹ್ಲಾದ ಹಾಗೂ ನರಸಿಂಹಾವತಾರದ ಕಥೆಯನ್ನು ಮುಂದಿನ ತಲೆಮಾರಿನ ಪ್ರೇಕ್ಷಕರಿಗೆ ತಿಳಿಸಲು ಒಂದು ಆನಿಮೇಷನ್ ಸಿನಿಮಾ ಸಿದ್ಧವಾಗಿದೆ. ‘ಮಹಾವತಾರ ನರಸಿಂಹ’ ಎಂದು ಈ ಚಿತ್ರಕ್ಕೆ ಹೆಸರು ಇಡಲಾಗಿದೆ. ಈಗಾಗಲೇ ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ಜುಲೈ 25ಕ್ಕೆ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ‘ಹೊಂಬಾಳೆ ಫಿಲ್ಮ್ಸ್’ ಮೂಲಕ ಕರ್ನಾಟಕದಲ್ಲಿ ‘ಮಹಾವತಾರ ನರಸಿಂಹ’ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ.
‘ಮಹಾವತಾರ ನರಸಿಂಹ’ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಲಿರುವುದು ವಿಶೇಷ. ಜುಲೈ 22ರಂದು ಬೆಂಗಳೂರಿನಲ್ಲಿ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಚಿತ್ರದ ನಿರ್ದೇಶಕ ಅಶ್ವಿನ್ ಕುಮಾರ್ ಮಾತನಾಡಿದರು. ‘2018ರಲ್ಲಿ ಗೆಳೆಯರೆಲ್ಲ ಸೇರಿ ಭಕ್ತ ಪ್ರಹ್ಲಾದ ಬಗ್ಗೆ ಚರ್ಚೆ ಮಾಡಿದೆವು. ಆ ನಂತರ ನರಸಿಂಹ ಸ್ವಾಮಿ ಕುರಿತು ಸಿನಿಮಾ ಮಾಡಲು ಕನ್ನಡದ ಭಕ್ತ ಪ್ರಹ್ಲಾದ ಸೇರಿದಂತೆ ಹಲವು ಸಿನಿಮಾಗಳು ಮತ್ತು ಪುರಾಣಗಳನ್ನು ಓದಿ ಚಿತ್ರಕಥೆ ಮಾಡಲಾಗಿದೆ’ ಎಂದು ಅವರು ಹೇಳಿದರು.
‘ನಮ್ಮ ತಂಡ ಈ ಚಿತ್ರಕ್ಕಾಗಿ 5 ವರ್ಷ ಶ್ರಮ ಹಾಕಿದೆ. ಮುಖ್ಯವಾಗಿ ನಾವು ಈ ಸಿನಿಮಾವನ್ನು ‘ಭಕ್ತ ಪ್ರಹ್ಲಾದ’ ಚಿತ್ರವನ್ನು ಮೂಲವಾಗಿಟ್ಟುಕೊಂಡು ಮಾಡಿದ್ದೇವೆ. ಸಂಪೂರ್ಣ ಆ್ಯನಿಮೇಷನ್ ಸಿನಿಮಾ ಮಾಡುವುದು ಸುಲಭವಲ್ಲ. ಸಾಕಷ್ಟು ತಾಂತ್ರಿಕ ಸಮಸ್ಯೆಗಳಿವೆ. ಅದನ್ನೆಲ್ಲ ಮೀರಿ ನಾಲ್ಕೂವರೆ ವರ್ಷಗಳಲ್ಲಿ ಈ ಸಿನಿಮಾ ರೂಪಿಸಿದ್ದೇವೆ. ಈ ಸರಣಿಯ ಮುಂದುವರಿದ ಭಾಗವಾಗಿ ‘ಮಹಾವತಾರ ಪರಶುರಾಮ’ ಸಿನಿಮಾ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ’ ಎಂದು ನಿರ್ದೇಶಕ ಅಶ್ವಿನ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ಪರವಾಗಿ ಆದರ್ಶ ಅವರು ಮಾತನಾಡಿದರು. ‘ನಮ್ಮ ತಂಡ ಸಿನಿಮಾ ನೋಡಿದೆ. ಈ ಚಿತ್ರವನ್ನು ನಾವು ಅರ್ಪಿಸುತ್ತಿದ್ದೇವೆ. ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಯೋಚನೆ ಇದೆ’ ಎಂದು ಅವರು ಹೇಳಿದರು. ‘ಮಹಾವತಾರ ನರಸಿಂಹ’ ಸಿನಿಮಾವನ್ನು ಅಶ್ವಿನ್ ಕುಮಾರ್ ಪತ್ನಿ ಶಿಲ್ಪಾ ಧವನ್ ಅವರು ನಿರ್ಮಿಸಿದ್ದಾರೆ.