ಮೂರುವರೆ ವರ್ಷದ ಹಿತಾರ್ಥ್ “SP” ಆದ ದಿನ.

ಮೂರುವರೆ ವರ್ಷದ ಹಿತಾರ್ಥ್ “SP” ಆದ ದಿನ.

ರಕ್ತದ ಕ್ಯಾನ್ಸರ್ ಎದುರಿಸುತ್ತಿರುವ ಬಾಲಕನ ಕನಸು ನನಸು.

ದಾವಣಗೆರೆ: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮೂರುವರೆ ವರ್ಷದ ಬಾಲಕ ಹಿತಾರ್ಥ್‌ ಅವರ ಕನಸನ್ನು ನನಸುಗೊಳಿಸಿದ ಅಪರೂಪದ ಘಟನೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಮಗನನ್ನು ಪೊಲೀಸ್ ಮಾಡಬೇಕೆಂಬ ಬಾಲಕನ ತಂದೆಯ ಆಸೆಗೆ ಸ್ಪಂದಿಸಿದ ಎಸ್ಪಿ ಶೇಖರ್ ಹೆಚ್ ಟಿ, ಖಾಕಿ ತೊಟ್ಟು ಬಂದ ಪುಟ್ಟ ಮಗುವನ್ನು ತಮ್ಮ ಚೇರ್ ಮೇಲೆ ಕೂರಿಸಿ ಮಾನವೀಯತೆ ಮೆರೆದಿದ್ದಾರೆ.

ಒಂದೂವರೆ ವರ್ಷಕ್ಕೆ ಕಾನ್ಸರ್!

ಹೊನ್ನಾಳಿ ತಾಲೂಕಿನ ಹೊಸಳ್ಳಿ ಗ್ರಾಮದ ಪ್ರಭು ಹಾಗೂ ಅನುಷಾ ದಂಪತಿಯ ಎರಡನೇ ಪುತ್ರನಾದ ಹಿತಾರ್ಥ್‌ಗೆ ಒಂದುವರೆ ವರ್ಷ ವಯಸ್ಸಿನಲ್ಲಿಯೇ ರಕ್ತದ ಕ್ಯಾನ್ಸರ್ ಪತ್ತೆಯಾಗಿತ್ತು. ಕಳೆದ ಎರಡು ವರ್ಷಗಳಿಂದ ಆತ ಚಿಕಿತ್ಸೆ ಪಡೆಯುತ್ತಿದ್ದನಲ್ಲದೆ, ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ಎಂಟು ತಿಂಗಳು ನಿರಂತರ ಚಿಕಿತ್ಸೆ ಪಡೆದಿದ್ದಾನೆ. ಚಿಕಿತ್ಸೆ ಫಲವಾಗಿ ಈಗಾಗಲೇ ಶೇಕಡಾ 80ರಷ್ಟು ಚೇತರಿಕೆ ಕಂಡಿದ್ದರೂ ಪಾಲಕರ ಮನಸ್ಸು ಜರ್ಜರಿತವಾಗಿಯೇ ಉಳಿದಿದೆ.

ಮಗನನ್ನು ಪೊಲೀಸ್ ಮಾಡಬೇಕೆಂಬ ತಂದೆಯ ಆಸೆಗೆ ಸ್ಪಂದನೆ

ಓರ್ವ ಪೊಲೀಸ್ ಅಧಿಕಾರಿಯಾಗಬೇಕೆಂದು ಆಸೆ ಹೊತ್ತಿದ್ದ ಬಾಲಕನ ತಂದೆ ಪ್ರಭುವಿಗೆ ಆ ಆಸೆ ಈಡೇರಿಸಿಕೊಳ್ಳುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಹಿತಾರ್ಥ್ ಹುಟ್ಟಿದ ದಿನವೇ ತಮ್ಮ ಮಗ ಪೊಲೀಸ್ ಅಧಿಕಾರಿ ಆಗಬೇಕು ಎಂಬ ಆಸೆಯೂ ಹುಟ್ಟಿಕೊಂಡಿತ್ತು. ಆದರೆ ಮಗುವಿಗೆ ಬ್ಲಡ್ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ತಂದೆ ತಾಯಿ ಇಬ್ಬರ ಹೃದಯವೂ ನುಚ್ಚು ನೂರಾಗಿತ್ತು. ಆದರೆ ಮಗನನ್ನು ಪೊಲೀಸ್ ಯೂನಿಫಾರ್ಮ್​ನಲ್ಲಿ ನೋಡಬೇಕೆನ್ನುವ ಪ್ರಭುವಿನ ಆಸೆ ಹಾಗೆಯೇ ಇತ್ತು. ಆದ ಕಾರಣ ಮಗನಿಗೆ ಖಾಕಿ ಯೂನಿಫಾರ್ಮ್ ಧರಿಸಿ ಎಸ್‌ಪಿ ಕಚೇರಿಗೆ ಕರೆದುಕೊಂಡು ಬಂದಿದ್ದರು. ಪರಿಸ್ಥಿತಿ ತಿಳಿದ ಎಸ್‌ಪಿ ಶೇಖರ್ ಹೆಚ್.ಟಿ. ಅವರು ಹಿತಾರ್ಥ್‌ಗೆ ಹೂಗುಚ್ಛ ನೀಡಿ ಸ್ವಾಗತಿಸಿ, ತಮ್ಮ ಕುರ್ಚಿಯಲ್ಲಿ ಕೂರಿಸಿ ಕೆಲಕಾಲ “ಎಸ್‌ಪಿ” ಆಗುವ ಅವಕಾಶ ನೀಡಿದರು.

ಮಗು ನಗುಮುಖದಿಂದ ಕುರ್ಚಿಯಲ್ಲಿ ಕುಳಿತ ದೃಶ್ಯ ಕಂಡು ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾವುಕರಾದರು. ಎಸ್‌ಪಿ ಅವರ ಈ ಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಬಾಲಕನ ಕನಸಿಗೆ ಚಿಗುರುಕೊಟ್ಟ ಈ ಘಟನೆ ಎಲ್ಲರ ಹೃದಯ ಸ್ಪರ್ಶಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *