ನಟ ದರ್ಶನ್ ಅವರು ‘ದಿ ಡೆವಿಲ್’ ಸಿನಿಮಾದ ತಮ್ಮ ಪಾಲಿನ ಎಲ್ಲ ಕೆಲಸಗಳನ್ನು ಮುಗಿಸಿಕೊಟ್ಟಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಅವರು ಜೈಲು ಸೇರಿದ್ದಾರೆ. ಹಾಗಿದ್ದರೂ ಕೂಡ ಸಿನಿಮಾ ಬಿಡುಗಡೆಗೆ ತೊಂದರೆ ಆಗಬಾರದು ಎಂದು ಅವರು ನಿರ್ಧರಿಸಿದ್ದಾರೆ. ಆದ್ದರಿಂದ ದರ್ಶನ್ ಅನುಪಸ್ಥಿತಿಯಲ್ಲೇ ‘ದಿ ಡೆವಿಲ್’ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಈಗ ಈ ಚಿತ್ರದ ರಿಲೀಸ್ ದಿನಾಂಕ ಪ್ರಕಟಿಸಲಾಗಿದೆ. ಇದೇ ವರ್ಷ ಈ ಸಿನಿಮಾ ಬಿಡುಗಡೆ ಆಗಲಿದೆ. ಡಿಸೆಂಬರ್ 12ರಂದು ‘ದಿ ಡೆವಿಲ್’ ಸಿನಿಮಾ ಅದ್ದೂರಿಯಾಗಿ ತೆರೆಕಾಣಲಿದೆ.
ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿದ್ದಾರೆ. ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈಗಾಗಲೇ ಟೀಸರ್ ಗಮನ ಸೆಳೆದಿದೆ. ಅಲ್ಲದೇ, ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಕೂಡ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ.
ಆಗಸ್ಟ್ 24ರಂದು ದರ್ಶನ್ ಅಭಿಮಾನಿಗಳಿಗೆ ಡಬಲ್ ಧಮಾಕಾ ಎದುರಾಯಿತು. ಬೆಳಗ್ಗೆ 10 ಗಂಟೆ 3 ನಿಮಿಷಯಕ್ಕೆ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ ಆಯಿತು. ಅದರ ಬೆನ್ನಲ್ಲೇ ಚಿತ್ರತಂಡದವರು ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡಿದರು. ಇದು ಅಭಿಮಾನಿಗಳಿಗೆ ಸರ್ಪ್ರೈಸ್ ಆಗಿತ್ತು. ಒಟ್ಟಿನಲ್ಲಿ ‘ದಿ ಡೆವಿಲ್’ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ.
ದರ್ಶನ್ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ದಿ ಡೆವಿಲ್’ ಸಿನಿಮಾದ ರಿಲೀಸ್ ಡೇಟ್ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಜೈಲಿನಲ್ಲಿ ಇರುವ ಅವರ ಖಾತೆಯನ್ನು ಈಗ ಪತ್ನಿ ವಿಜಯಲಕ್ಷ್ಮಿ ಅವರು ನಿಭಾಯಿಸುತ್ತಿದ್ದಾರೆ. ‘ನಲ್ಮೆಯ ಸೆಲೆಬ್ರಿಟೀಸ್, ನಿಮ್ಮ ನಿರಂತರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಅನಂತ ಧನ್ಯವಾದಗಳು. ನೀವು ಕಾತುರದಿಂದ ಕಾಯುತ್ತಿದ್ದ ದಿ ಡೆವಿಲ್ ಡಿಸೆಂಬರ್ 12ರಂದು ಬಿಡುಗಡೆಯಾಗಲಿದೆ’ ಎಂದು ಪೋಸ್ಟ್ ಮಾಡಲಾಗಿದೆ.
‘ದಿ ಡೆವಿಲ್’ ಸಿನಿಮಾದ ಬಿಡುಗಡೆಗೆ ಇನ್ನೂ ಸಮಯ ಇದೆ. ಅಷ್ಟರೊಳಗೆ ದರ್ಶನ್ ಅವರು ಒಂದು ವೇಳೆ ಜಾಮೀನು ಪಡೆದು ಹೊರಗೆ ಬಂದರೆ ಖಂಡಿತವಾಗಿಯೂ ಅಭಿಮಾನಿಗಳಿಗೆ ಹಬ್ಬ ಆಗಲಿದೆ. ತಮ್ಮ ನೆಚ್ಚಿನ ನಟನ ಜೊತೆಯಲ್ಲೇ ‘ದಿ ಡೆವಿಲ್’ ಬಿಡುಗಡೆಯನ್ನು ಸಂಭ್ರಮಿಸಬಹುದು. ಜಾಮೀನು ಸಿಗದೇ ಇದ್ದರೆ ಆ ಕೊರಗಿನ ನಡುವೆಯೂ ಸಿನಿಮಾ ನೋಡುವುದು ಅಭಿಮಾನಿಗಳಿಗೆ ಅನಿವಾರ್ಯ ಆಗಲಿದೆ.
For More Updates Join our WhatsApp Group :