‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಅಭಿನಯಿಸಿರುವ ‘ದಿ ಡೆವಿಲ್’ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 11ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಈಗ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಅವರು ಹೊರಗೆ ಬಂದ ನಂತರವೇ ಸುದ್ದಿಗೋಷ್ಠಿ ಮಾಡೋಣ ಎಂಬುದು ನಿರ್ದೇಶಕ ಪ್ರಕಾಶ್ ವೀರ್ ಅವರ ಪ್ಲ್ಯಾನ್ ಆಗಿತ್ತು. ಆದರೆ ಇಷ್ಟು ದಿನಗಳು ಕಾದರೂ ಕೂಡ ದರ್ಶನ್ ಅವರು ಜೈಲಿನಿಂದ ಹೊರಗೆ ಬರಲೇ ಇಲ್ಲ. ಹಾಗಾಗಿ ದರ್ಶನ್ ಅವರ ಅನುಪಸ್ಥಿತಿಯಲ್ಲೇ ‘ದಿ ಡೆವಿಲ್’ ಸಿನಿಮಾ ತಂಡ ಸುದ್ದಿಗೋಷ್ಠಿ ಮಾಡಿದೆ. ಈ ವೇಳೆ ಪ್ರಕಾಶ್ ವೀರ್ ಅವರು ಮಾತನಾಡಿದರು.
‘ಎಲ್ಲರಿಗೂ ಕ್ಷಮೆ ಕೇಳುತ್ತೇನೆ. ಇಷ್ಟು ದಿನ ಕಾದು ನಾವು ಇಂದು ಪ್ರೆಸ್ ಮೀಟ್ ಮಾಡುತ್ತಿದ್ದೇವೆ. ಅದಕ್ಕಾಗಿ ಕ್ಷಮೆ ಇರಲಿ. ಅದಕ್ಕೆ ಕಾರಣ ಇಷ್ಟೇ.. ಈ ಹಿಂದೆ ನಾವು ಒಂದು ಸುದ್ದಿಗೋಷ್ಠಿ ಮಾಡಬೇಕು ಎಂದಾಗ ತುಂಬಾ ಗೊಂದಲಗಳು ಇದ್ದವು. ಆ ಬಳಿಕ ದರ್ಶನ್ ಬರುತ್ತಾರೆ, ಅವರು ನಮ್ಮ ಜೊತೆ ಇರುತ್ತಾರೆ ಎಂಬ ಒಂದೇ ಒಂದು ಆಸೆ ಇಟ್ಟುಕೊಂಡು ನಾನು ಇಷ್ಟು ದಿನ ಸುದ್ದಿಗೋಷ್ಠಿಯನ್ನು ಮುಂದಕ್ಕೆ ತಳ್ಳಿದೆ. ದುರಾದೃಷ್ಟವಶಾತ್ ಇಂದು ಕೂಡ ದರ್ಶನ್ ನಮ್ಮ ಜೊತೆ ಇಲ್ಲ’ ಎಂದು ಪ್ರಕಾಶ್ ವೀರ್ ಅವರು ಸುದ್ದಿಗೋಷ್ಠಿ ಆರಂಭಿಸಿದರು.
‘ದರ್ಶನ್ ನನ್ನ ಜೊತೆ ಇದ್ದರೆ ಒಂದು ಆನೆ ಬಲ. ಏನೋ ಒಂದು ಸಪೋರ್ಟ್ ಸಿಸ್ಟಮ್. ಅದನ್ನು ನಾನು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ. 2018ರಲ್ಲೇ ನಾನು ಮತ್ತು ದರ್ಶನ್ ಅವರು ಈ ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದೆವು. ಅವರು ಯಾವಾಗಲೂ ನನಗೆ ಫೋರ್ಸ್ ಮಾಡಲ್ಲ. ಸಮಯ ತೆಗೆದುಕೊಂಡು ಸ್ಕ್ರೀನ್ ಪ್ಲೇ ಮಾಡಿಕೊಂಡು ಬಂದ ನಂತರ ಶೂಟಿಂಗ್ ಮಾಡೋಣ ಎಂದಿದ್ದರು. ಆ ಮೇಲೆ ಕೊವಿಡ್ ಬಂತು, ನಮ್ಮ ತಂದೆ ತೀರಿಕೊಂಡರು’ ಎಂದಿದ್ದಾರೆ ಪ್ರಕಾಶ್ ವೀರ್.
For More Updates Join our WhatsApp Group :
