ಮುಡಾ ನಿವೇಶನ ಹಂಚಿಕೆಯಲ್ಲಿ ಸಿದ್ದರಾಮಯ್ಯ ಪಾತ್ರದ ಬಗ್ಗೆ ರಾಜ್ಯಪಾಲರು ಉಲ್ಲೇಖಿಸಿಲ್ಲ

Siddaramaiah Appeal High court

Siddaramaiah Appeal High court

ಬೆಂಗಳೂರು : ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ

ಹೈಕೋರ್ಟ್‌ನಲ್ಲಿ ಸಿಎಂ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರು, ತಮ್ಮ ಪತ್ನಿ ಪಾರ್ವತಿ ಬಿಎಂ ಅವರಿಗೆ ಅಕ್ರಮವಾಗಿ ಪರಿಹಾರದ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರವೇನು ಮತ್ತು ಹೇಗೆ ಎಂಬುದನ್ನು ರಾಜ್ಯಪಾಲರು ಉಲ್ಲೇಖಿಸಿಲ್ಲ ಮತ್ತು ಯಾವುದೇ ಕಾರಣಗಳನ್ನು ನೀಡದೆ ಹಾಗೂ ತನಿಖೆ ಇಲ್ಲದೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ

ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ರಕ್ಷಣೆಯನ್ನು ವಿಸ್ತರಿಸದಿದ್ದರೆ ಚುನಾಯಿತ ಸರ್ಕಾರ ಪತನವಾಗುವ ಸಾಧ್ಯತೆಗಳಿವೆ ಎಂದು ಸಿಂಘ್ವಿ ಆತಂಕ ವ್ಯಕ್ತಪಡಿಸಿದರು

”ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ಏನು ಕಾರಣ ಎನ್ನುವ ಬಗ್ಗೆ ಉತ್ತರವಿಲ್ಲ. ಶೂನ್ಯ ಉತ್ತರದೊಂದಿಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಹೇಗೆ, ಯಾವ ನಿರ್ಧಾರ, ಶಿಫಾರಸು ಮೂಲಕ ಪ್ರಭಾವ ಬೀರಿದ್ದಾರೆ. ಇದ್ಯಾವುದನ್ನೂ ರಾಜ್ಯಪಾಲರು ತಮ್ಮ ಆದೇಶದಲ್ಲಿ ಉಲ್ಲೇಖಿಸಿಲ್ಲ. ರಾಜ್ಯಪಾಲರ ಆದೇಶದಲ್ಲಿಯೂ ಅವರು ಪರಿಶೀಲಿಸಿದ ಕಡತಗಳ ಉಲ್ಲೇಖವಿಲ್ಲ. ಇಂತಹ ಟಿಪ್ಪಣಿಗಳ ಆಧಾರದ ಮೇಲೆ ನಿರ್ಧಾರ ಕೈಗೊಂಡಿದ್ದೇನೆ ಎಂದಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಪ್ರತಿಕ್ರಿಯೆ ಬಗ್ಗೆಯೂ ಉಲ್ಲೇಖಿಸಿಲ್ಲ. ಪ್ರಕರಣದಲ್ಲಿ ಸಿದ್ದರಾಮಯ್ಯ ಪಾತ್ರ ಏನು ಎಂಬುದನ್ನು ರಾಜ್ಯಪಾಲರು ತಿಳಿಸಿಲ್ಲ” ಎಂದು ಸಿಂಘ್ವಿ ವಾದ ಮಂಡಿಸಿದರು.

ಮೂರನೇ ವ್ಯಕ್ತಿಗಳು ಸಲ್ಲಿಸಿದ ರಾಜಕೀಯ ಪ್ರೇರಿತ ದೂರುಗಳನ್ನು ಸ್ವೀಕರಿಸಿ ಏಕಪಕ್ಷೀಯವಾಗಿ ರಾಜ್ಯಪಾಲರ ಅನುಮತಿ ನೀಡಿರುವುದು ಸರಿಯಲ್ಲ. ರಾಜ್ಯಪಾಲರು ಸಹಜ ನ್ಯಾಯ ಪ್ರಕ್ರಿಯೆಯನ್ನು ಪಾಲಿಸಿಲ್ಲ. ಪ್ರಕರಣ ಸಂಬಂಧ ಮೂರು ಮನವಿಗಳು ಬಂದಿವೆ. ಒಂದು ಮನವಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಮತ್ತಿಬ್ಬರ ದೂರಿನ ಕುರಿತು ಶೋಕಾಸ್ ನೋಟಿಸ್ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಆದರೆ, ಯಾವುದೇ ದೂರಿಗೂ ಶೋಕಾಸ್ ನೋಟಿಸ್ ನೀಡಿಲ್ಲದಿದ್ದರೆ ಅಗತ್ಯವಿಲ್ಲವೆನ್ನಬಹುದಿತ್ತು. ಒಬ್ಬರ ದೂರಿಗೆ ನೀಡಿ, ಇಬ್ಬರ ದೂರಿಗೆ ಶೋಕಾಸ್ ನೋಟಿಸ್ ನೀಡಿಲ್ಲ. ಅಲ್ಲದೇ, ಮುಖ್ಯಮಂತ್ರಿಗಳನ್ನು ಹೊರತುಪಡಿಸಿ ಉಳಿದವರಿಗೆ ಪ್ರಾಸಿಕ್ಯೂಷನ್ ಅನುಮತಿ ನೀಡಿಲ್ಲ. ಶಶಿಕಲಾ ಜೊಲ್ಲೆ ಪ್ರಕರಣದಲ್ಲಿ ತಿರಸ್ಕರಿಸಲಾಗಿದೆ, ಮುರುಗೇಶ್ ನಿರಾಣಿ ಪ್ರಕರಣದಲ್ಲಿ ಸ್ಪಷ್ಟನೆ ಕೇಳಿ ಹಿಂತಿರುಗಿಸಲಾಗಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಕರಣವನ್ನು ಹಿಂತಿರುಗಿಸಲಾಗಿದೆ” ಎಂದು ವಿವರಿಸಿದರು.

ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಮ್ಯಾರಥಾನ್ ವಾದಗಳ ನಂತರ ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರು ಗುರುವಾರ ಆದೇಶವನ್ನು ಕಾಯ್ದಿರಿಸಿದ್ದಾರೆ.

Leave a Reply

Your email address will not be published. Required fields are marked *