ಮ್ಯಾಕ್ಸ್ ಛಾಯೆಯಲ್ಲೇ ಮೂಡಿಬಂದ ‘ಮಾರ್ಕ್’.
ನಟ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ನಲ್ಲಿ ಈ ಮೊದಲು ‘ಮ್ಯಾಕ್ಸ್’ ಸಿನಿಮಾ ಬಂದಿತ್ತು. ಈಗ ಅದೇ ಕಾಂಬಿನೇಷನ್ನಲ್ಲಿ ‘ಮಾರ್ಕ್’ ಸಿನಿಮಾಮಾಡಲಾಗಿದೆ. ಡಿಸೆಂಬರ್ 25ರಂದು ಬಿಡುಗಡೆ ಆಗಿರುವ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇತ್ತು. ಹಾಗಾದರೆ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ‘ಮಾರ್ಕ್’ ಚಿತ್ರ ಮೂಡಿಬಂದಿದೆಯಾ? ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಯಾವ ರೀತಿಯ ಮನರಂಜನೆ ಸಿಗಲಿದೆ? ಈ ವಿಮರ್ಶೆಯಲ್ಲಿದೆ ಉತ್ತರ..
‘ಮಾರ್ಕ್’ ಸಿನಿಮಾದ ಟ್ರೇಲರ್ ಬಿಡುಗಡೆ ಆದಾಗ ಈ ಚಿತ್ರದ ಕಥೆ ಏನು ಎಂಬ ಬಗ್ಗೆ ಸುಳಿವು ಸಿಕ್ಕಿತ್ತು. ಈ ಬಾರಿ ಕೂಡ ಕಿಚ್ಚ ಸುದೀಪ್ ಮತ್ತು ಡೈರೆಕ್ಟರ್ ವಿಜಯ್ ಕಾರ್ತಿಕೇಯ ಅವರು ‘ಮ್ಯಾಕ್ಸ್’ ರೀತಿಯ ಸಿನಿಮಾವನ್ನೇ ಮಾಡಿರಬಹುದು ಎಂಬ ಅಭಿಪ್ರಾಯ ಮೂಡಿತ್ತು. ಅದು ನಿಜವಾಗಿದೆ. ‘ಮಾರ್ಕ್’ ಕೂಡ ‘ಮ್ಯಾಕ್ಸ್’ ರೀತಿಯೇ ಇದೆ. ಆರಂಭದಿಂದ ಕೊನೇ ತನಕ ಎರಡೂ ಸಿನಿಮಾಗಳ ನಡುವೆ ಸಾಮ್ಯತೆ ಕಾಣುತ್ತದೆ.
ನೀವು ‘ಮ್ಯಾಕ್ಸ್’ ನೋಡಿ ಇಷ್ಟಪಟ್ಟ ಪ್ರೇಕ್ಷಕರಾಗಿದ್ದರೆ ನಿಮಗೆ ‘ಮಾರ್ಕ್’ ಕೂಡ ಇಷ್ಟ ಆಗುತ್ತದೆ. ಬಹುತೇಕ ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯನ್ನು ‘ಮ್ಯಾಕ್ಸ್’ ಚಿತ್ರದಲ್ಲಿ ತೋರಿಸಲಾಗಿತ್ತು. ಈಗ ಒಂದೂವರೆ ದಿನದಲ್ಲಿ ನಡೆಯುವ ಕಥೆಯನ್ನು ‘ಮಾರ್ಕ್’ ಸಿನಿಮಾ ತೆರೆದಿಟ್ಟಿದೆ. ಕಲಾವಿದರು ಬೇರೆ ಆದರೂ ಬಹುತೇಕ ಅದೇ ತಂತ್ರಜ್ಞರು ಎರಡೂ ಸಿನಿಮಾಗೆ ಕೆಲಸ ಮಾಡಿರುವುದರಿಂದ ಒಂದೇ ರೀತಿಯ ಫೀಲ್ ಮುಂದುವರಿದಿದೆ.
‘ಮಾರ್ಕ್’ ಮತ್ತು ‘ಮ್ಯಾಕ್ಸ್’ ಸಿನಿಮಾಗಳಿಗೆ ಹೋಲಿಸಿದರೆ ‘ಮಾರ್ಕ್’ ಕಥೆ ಹೊಸದಾಗಿದೆ. ಆದರೆ ಪ್ಯಾಟರ್ನ್ ಒಂದೇ ರೀತಿ ಇದೆ. ಡ್ರಗ್ಸ್ ಮಾಫಿಯಾ, ರಾಜಕೀಯದ ಪಿತೂರಿ ಹಾಗೂ ಮಕ್ಕಳ ಅಪಹರಣದ ಗ್ಯಾಂಗ್. ಈ ಮೂರು ಅಂಶಗಳು ಪೊಲೀಸ್ ಇಲಾಖೆಗೆ ಸವಾಲಾಗುತ್ತದೆ. ಅದನ್ನು ಎದುರಿಸಲು ಕಥಾನಾಯಕನಿಗೆ ಕೆಲವೇ ಗಂಟೆಗಳ ಸಮಯ ಇರುತ್ತದೆ. ಅಂತಿಮವಾಗಿ ಅವನು ದುಷ್ಟರ ವಿರುದ್ಧ ಹೇಗೆಲ್ಲ ಹೋರಾಡುತ್ತಾನೆ? ಒಳ್ಳೆಯವರನ್ನು ಹೇಗೆ ಕಾಪಾಡುತ್ತಾನೆ ಎಂಬುದೇ ‘ಮಾರ್ಕ್’ ಕಥೆಯ ಸಾರಾಂಶ.
For More Updates Join our WhatsApp Group :




