ಮಂಗಳೂರು: ಮೊಂತಾ ಚಂಡಮಾರುತದ ಪರಿಣಾಮ ಕರ್ನಾಟಕದ ಕರಾವಳಿಗೂ ತಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಂಡಮಾರುತದ ಪ್ರಭಾವದಿಂದ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಅರಬ್ಬಿ ಸಮುದ್ರವು ಪ್ರಕ್ಷುಬದ್ಧಗೊಂಡಿದೆ. ಮಂಗಳೂರಿನ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗವೂ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆಯು ಮೀನುಗಾರರಿಗೆ ಆಳಸಮುದ್ರ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಿದೆ. ಕಳೆದ ಮೂರು ದಿನಗಳ ಹಿಂದೆಯೇ ಸೂಚನೆ ನೀಡಲಾಗಿದ್ದು, ತೆರಳಿದ್ದ ಮೀನುಗಾರರು ವಾಪಸ್ ಬರುವಂತೆ ಸೂಚಿಸಲಾಗಿದೆ. ಬಹುತೇಕ ದೋಣಿಗಳು ಬಂದರಿನಲ್ಲಿ ಲಂಗರು ಹಾಕಿವೆ. ಮೀನುಗಾರಿಕೆಯನ್ನು ನಿಷೇಧಿಸಲಾಗಿದ್ದು, ನಾಡದೋಣಿ ಮೀನುಗಾರಿಕೆಗೂ ನಿರ್ಬಂಧ ವಿಧಿಸಲಾಗಿದೆ. ಯಾವುದೇ ಅವಘಡ ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಮೋಡಕವಿದ ವಾತಾವರಣ ಮುಂದುವರಿದಿದೆ.
For More Updates Join our WhatsApp Group :
