ಚಿಕ್ಕಬಳ್ಳಾಪುರ: ನಂದಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಶೀಘ್ರದಲ್ಲೇ ಆಕರ್ಷಕ ಕೇಬಲ್ ಕಾರ್ ಸವಾರಿ ಅನುಭವಿಸಲು ಅವಕಾಶ ಸಿಗಲಿದೆ. 2.9 ಕಿಲೋಮೀಟರ್ ಉದ್ದದ ರೋಪ್ ವೇ ಯೋಜನೆ ಯಾವುದೇ ವಿಳಂಬವಿಲ್ಲದಿದ್ದರೆ, ಈ ವರ್ಷದ ಅಂತ್ಯ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದ್ದು, 2027ರ ಮಧ್ಯಭಾಗದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಅನುಮೋದನೆಗಾಗಿ ಕಾಯುತ್ತಿರುವ ಪ್ರವಾಸೋದ್ಯಮ ಇಲಾಖೆ
ಮೇಲಿನ ಟರ್ಮಿನಲ್‌ಗಾಗಿ ಅಗತ್ಯವಿರುವ ಸುಮಾರು 3.5 ಎಕರೆ ಖಾಸಗಿ ಭೂಮಿ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ನವೆಂಬರ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭೂಮಿಯನ್ನು ಹಸ್ತಾಂತರಿಸುವ ಸಾಧ್ಯತೆಯಿದೆ. ಕೆಳ ಟರ್ಮಿನಲ್‌ಗಾಗಿ ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಲಾಗಿದೆ. ಉಳಿದ ಭೂಮಿಯನ್ನು ಪಡೆದ ನಂತರ ನಿರ್ಮಾಣ ಚುರುಕುಗೊಳ್ಳುವ ನಿರೀಕ್ಷೆಯಿದೆ.ಮೇಲ್ಭಾಗದ ಟರ್ಮಿನಲ್ ಸೈಟ್ ಭೂಮಿಯು ಖಾಸಗೀ ಮಾಲಿಕತ್ವದ್ದಾಗಿದೆ.
ರಾಜ್ಯ ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಡೈನಾಮಿಕ್ಸ್ ರೋಪ್ ವೇ ಪ್ರೈವೇಟ್ ಲಿಮಿಟೆಡ್ ವತಿಯಿಂದ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನಿರ್ಮಾಣ ಕಾರ್ಯ ಮುಂದುವರಿಯುವ ಮೊದಲು ವಿವಿಧ ಸರ್ಕಾರಿ ಇಲಾಖೆಗಳಿಂದ ಹಲವಾರು ಅನುಮೋದನೆಗಳು ಬೇಕಾಗುತ್ತವೆ. ಇವುಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (KSPCB) ಪರಿಸರ ಅನುಮತಿಯೂ ತೆಗೆದುಕೊಳ್ಳಬೇಕಾಗುತ್ತದೆ.
ಈ ವರ್ಷದ ಅಂತ್ಯಕ್ಕೆ ರೋಪ್ ವೇ ಸಿವಿಲ್ ಕಾರ್ಯಾರಂಭ
ಎಲ್ಲವೂ ಯೋಜನೆಯಂತೆ ನಡೆದರೆ, ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದ ಸಮಯಕ್ಕೆ ಸಿವಿಲ್ ಕೆಲಸಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ನಿರ್ಮಾಣಕ್ಕೆ ಸುಮಾರು 18 ತಿಂಗಳುಗಳ ಕಾಲಮಿತಿ ನಿಗದಿಪಡಿಸಲಾಗಿದ್ದು, 2027 ರ ಮಧ್ಯಭಾಗದಲ್ಲಿ ಪೂರ್ಣಗೊಳ್ಳುವ ಗುರಿಯನ್ನು ಹೊಂದಿದೆ. ದಶಕಗಳಿಂದ ಲಿಖಿತ ಸ್ವರೂಪದಲ್ಲೇ ಇದ್ದ 2.9 ಕಿಲೋಮೀಟರ್ ಉದ್ದದ ರೋಪ್ ವೇ, 2023 ರಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಂಕುಸ್ಥಾಪನೆ ಮಾಡಿದ ನಂತರ ಅಂತಿಮವಾಗಿ ಪ್ರಗತಿ ಕಂಡಿತು.
ಕೆಳ ಟರ್ಮಿನಲ್‌ನಲ್ಲಿ 200 ಕಾರುಗಳು, 110 ದ್ವಿಚಕ್ರ ವಾಹನಗಳು ಮತ್ತು ಬಸ್‌ಗಳು, ವ್ಯಾನ್‌ಗಳಿಗಾಗಿ ಪಾರ್ಕಿಂಗ್ ವ್ಯವಸ್ಥೆ ಇರುವ ನಿರೀಕ್ಷೆಯಿದೆ. 600 ಜನರಿಗೆ ಅವಕಾಶ ಕಲ್ಪಿಸುವ ವಿಶಾಲ ಪ್ರದೇಶವೂ ಯೋಜನೆಯ ಭಾಗವಾಗಿದೆ. ಸುಮಾರು 50 ಕ್ಯಾಬಿನ್‌ಗಳೊಂದಿಗೆ ಕಾರ್ಯನಿರ್ವಹಿಸಲಿರುವ ಈ ರೋಪ್ ವೇ ಸವಾರಿಗೆ ಬೆಟ್ಟಗಳ ನೈಸರ್ಗಿಕ ಸೌಂದರ್ಯದ ನೋಟದ ಅವಕಾಶ ಕಲ್ಪಿಸಲಿದೆ. ಪ್ರವಾಸೋದ್ಯಮ ಮತ್ತು ಸಂಪರ್ಕಕ್ಕೆ ಉತ್ತೇಜನ ನೀಡುವ ಈ ಯೋಜನೆ, ನಂದಿ ಬೆಟ್ಟದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತಾ ಪ್ರವಾಸಿಗರಿಗೆ ಹೊಸ ಅನುಭವವನ್ನುನೀಡಲಿದೆ.
For More Updates Join our WhatsApp Group :
